ಗದ್ಯ-6 | ಎದೆಗೆ ಬಿದ್ದ ಅಕ್ಷರ | ದೇವನೂರ ಮಹದೇವ | 10th Kannada Gadya 6 Edege Bidda Akshara | Devanuru Mahadev |

ಗದ್ಯ- 6 : ಎದೆಗೆ ಬಿದ್ದ ಅಕ್ಷರ-ದೇವನೂರ ಮಹದೇವ

Video Lesson
ಕೃತಿಕಾರರ ಪರಿಚಯ:
ದೇವನೂರ ಮಹಾದೇವ ಅವರು ಕ್ರಿ.ಶ. 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕುಸುಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪ್ರಶಸ್ತಿ ದೊರಿತಿದೆ. ಪ್ರಸ್ತುತ ಎದೆಗೆ ಬಿದ್ದ ಅಕ್ಷರ ಗದ್ಯಭಾಗವನ್ನು ಇವರ ಎದೆಗೆ ಬಿದ್ದ ಅಕ್ಷರ ಕೃತಿಯಿಂದ ಆರಿಸಲಾಗಿದೆ.
I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು?
ಉ: ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳು.
2. ಮನೆ ಮಂಚಮ್ಮ ಯಾರು?
ಉ: ಮನೆ ಮಂಚಮ್ಮ ಊರಿನ ಗ್ರಾಮ ದೇವತೆ.
3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ದಲಿಂಗಯ್ಯ.
4. “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಯಾರು?
ಉ: “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಹಳಕಟ್ಟಿಯವರು. (ಫ.ಗು.ಹಳಕಟ್ಟಿ)
5. ವಚನಕಾರರಿಗೆ ಯಾವುದು ದೇವರಾಗಿತ್ತು?
ಉ: ವಚನಕಾರರಿಗೆ ಅವರವರ ಇಷ್ಟದೈವ ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.
6. ಅಶೋಕ ಪೈ ಅವರ ವೃತ್ತಿ ಯಾವುದು?
ಉ: ಅಶೋಕ ಪೈ ಅವರು ವೃತ್ತಿಯಿಂದ ಒಬ್ಬ ಮನೋವೈದ್ಯರು.
7. ದೇವನೂರರ “ನನ್ನ ದೇವರು” ಯಾರೆಂಬುದನ್ನು ಸ್ಪಷ್ಟೀಕರಿಸಿ?
ಉ: ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ದೇವನೂರರಿಗೆ ಅವನೇ ಅವರ ದೇವರು.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಉ: ಅಶೋಕ ಪೈಯವರು ಹೇಳಿದ ಮನಸ್ಸಿನ ಬಗ್ಗೆ ನಡೆದಿರುವ ಸಂಶೋಧನಾ ಸತ್ಯವೆಂದರೆ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವವರು ಅನುಭವಿಸುತ್ತಿರುವ ದುಃಖ ಅಥವಾ ಸಂತೋಷದ ಭಾವವು ಪಕ್ಕದ ಕೊಠಡಿಯಲ್ಲಿ ಟೆಲಿವಿಷನ್ ನೋಡದೆ ಕುಳಿತುರುವವರ ಮೇಲೂ ಸ್ವಲ್ಪ ಮಟ್ಟಿಗೆ ಅದೇ ರೀತಿಯಾದ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ಉದಾಹರಣೆ ವಿವರಿಸುವ ನಿಜವೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ವಿವರಿಸಿ?
ಉ: ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.

III. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಕವಿ ಸಿದ್ದಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ?
ಉ: ಕವಿ ಸಿದ್ದಲಿಂಗಯ್ಯ ಹೇಳಿದ ಕತೆಯಲ್ಲಿ ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿ ಕಟ್ಟಲು ಆರಂಭಿಸುತ್ತಾರೆ. ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ನ ಮಕ್ಕಳಾ” ಎಂದು ಅಬ್ಬರಿಸಿದಾಗ ಕೆಲಸ ನಿಲ್ಲಿಸಿದ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಮತ್ತು ಜನರ ನಡುವೆ ಮಾತುಕತೆ ನಡೆಯುತ್ತದೆ. ಏನು ಮಾಡುತ್ತಿದ್ದೀರಿ ಎಂಬ ದೇವತೆಯ ಪ್ರಶ್ನೆಗೆ ಜನರೆಲ್ಲ ನಿನಗೊಂದು ಗುಡಿ ಕಟ್ಟುತ್ತಿದ್ದೀವಿ ಎಂದು ಉತ್ತರಿಸುತ್ತಾರೆ. ಆಗ ದೇವತೆಯು ನನಗೆ ನೀವು ಮನೆ ಕಟ್ಟುತ್ತಿರುವಿರಾದರೆ ನನ್ನ ಮಕ್ಕಳಾದ ನಿಮಗೆಲ್ಲ ಮನೆ ಇದೆಯೋ ಎಂದು ಪ್ರಶ್ನಿಸುತ್ತಾಳೆ. ಆ ಜನರಲ್ಲಿ ಒಬ್ಬ ನನಗಿಲ್ಲ ಎಂದು ಉತ್ತರಿಸಿದಾಗ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ಎಂದು ಆದೇಶಿಸಿದ ಮಂಚಮ್ಮ ಮನೆ ಮಂಚಮ್ಮನಾಗುತ್ತಾಳೆ. ಹೀಗೆ ಚಾವಣಿಯಿಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದಿಗೂ ಪೂಜಿತಳಾಗುತ್ತಿದ್ದಾಳೆ.

IV. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ:
1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೆ ಮನೆ ಬೇಡ.”
ಉ: ಈ ಮೇಲಿನ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ “ಎದೆಗೆ ಬಿದ್ದ ಅಕ್ಷರ” ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಮಂಚಮ್ಮ ದೇವತೆ ಜನರಿಗೆ ಹೇಳಿದ್ದಾಳೆ.
ಸಂದರ್ಭ: ಕವಿ ಸಿದ್ದಲಿಂಗಯ್ಯನವರು ಲೇಖಕರಿಗೆ ಒಮ್ಮೆ ಹೇಳಿದ ಕತೆಯಲ್ಲಿ ಬರುವ ಪ್ರಸಂಗ ಇದಾಗಿದ್ದು ಅದರಲ್ಲಿ ಬರುವ ಹಾಗೆ ಒಂದು ಗ್ರಾಮದ ಜನರು ತಮ್ಮ ಗ್ರಾಮ ದೇವತೆಗೋಸ್ಕರ ಗುಡಿ ಕಟ್ಟಲು ಪ್ರಾರಂಭಿಸುತ್ತಾರೆ. ಗುಡಿ ಚಾವಣಿಯ ಮಟ್ಟವನ್ನು ತಲುಪಿದಾಗ ಇದ್ದಕ್ಕಿದ್ದಂತೆ ಜನರಿಗೆ ಪ್ರತ್ಯಕ್ಷಳಾದ ಮಂಚಮ್ಮ ದೇವತೆ ಅವರು ಮಾಡುತ್ತಿರುವ ಕಾರ್ಯದ ಕುರಿತು ವಿಚಾರಿಸುತ್ತಾಳೆ. ಜನರು ಅವಳಿಗಾಗಿಯೇ ಗುಡಿ ಕಟ್ಟುತ್ತಿರುವುದಾಗಿ ಹೇಳಿದಾಗ ಅವಳು ನಿಮಗೆಲ್ಲರಿಗೂ ಮನೆ ಇದೆಯೋ ಎಂದು ಪ್ರಶ್ನಿಸುತ್ತಾಳೆ. ಅವರಲ್ಲೊಬ್ಬ ತನಗಿಲ್ಲವೆಂದು ಹೇಳಿದಾಗ ಮಂಚಮ್ಮ ದೇವತೆ ಎಲ್ಲರಿಗೂ ಮನೆ ಆಗುವವರೆಗೆ ತನಗೆ ಮನೆ ಬೇಡವೆಂದು ಹೇಳುತ್ತಾಳೆ.
ಸ್ವಾರಸ್ಯ: ಬದುಕಲು ನೆಲೆ ಇಲ್ಲದೇ ಎಷ್ಟೋ ಜನರು ಕಣ್ಣೆದುರಿಗೆ ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಕಣ್ಣಿಗೆ ಕಾಣದ ದೇವತೆಗೆ ಮನೆ ಕಟ್ಟುವ ಪ್ರಯತ್ನ, ಅದನ್ನು ನೋಡಿದ ದೇವತೆಯೇ ಪ್ರತ್ಯಕ್ಷಳಾಗಿ ಸಮಾಜದಲ್ಲಿ ನಿಜವಾಗಿ ಯಾರಿಗೆ ಮನೆಯ ಅಥವಾ ಆಶ್ರಯದ ಅವಶ್ಯಕತೆ ಇದೆಯೋ ಅಂತವರಿಗೆ ನೆಲೆ ಒದಗಿಸಬೇಕಾದ ಅವಶ್ಯಕತೆಯನ್ನು ನೆರೆದ ಜನರಿಗೆ ಹೇಳುವ ಮೂಲಕ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಪ್ರಸ್ತುತ ವಾಕ್ಯವು ಸೂಚಿಸುವುದು.

2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಉ: ಈ ಮೇಲಿನ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ “ಎದೆಗೆ ಬಿದ್ದ ಅಕ್ಷರ” ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಮನೋವೈದ್ಯರಾದ ಅಶೋಕ ಪೈಯವರು ಮನಸ್ಸಿನ ಬಗ್ಗೆ ನಡೆದ ಒಂದು ಸಂಶೋಧನಾ ಸತ್ಯದ ಕುರಿತು ಹೇಳುತ್ತಾ ಒಂದು ಕೊಠಡಿಯಲ್ಲಿ ಒಂದಷ್ಟು ಜನರು ಟೆಲಿವಿಷನ್ ವೀಕ್ಷಿಸುತ್ತಿರುವಾಗ ಅವರು ನೋಡುವ ಸನ್ನಿವೇಷಗಳಿಗೆ ತಕ್ಕಂತೆ ದುಃಖ ಅಥವಾ ಸಂತೋಷದ ಭಾವವನ್ನು ಅನುಭವಿಸುತ್ತಿರುವಾಗ ಅವರ ಭಾವವು ಅವರ ಪಕ್ಕದ ಕೊಠಡಿಯಲ್ಲಿ ಟೆಲಿವಿಷನ್ ನೋಡದೆ ಇರುವವರನ್ನು ಸ್ವಲ್ಪ ಮಟ್ಟಿಗಾದರೂ ತಲುಪಿ ಅವರು ಕೂಡ ದುಃಖ ಅಥವಾ ಸಂತೋಷದ ಭಾವವನ್ನು ಅಲ್ಪ ಮಟ್ಟಿಗೆ ತಾಳುತ್ತಾರೆ ಎಂದು ವಿವರಿಸಿದ್ದಾರೆ. ಇದನ್ನು ಗಮನಿಸಿದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಅರ್ಥವಾಗುತ್ತದೆ. ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಎಲ್ಲ ರೀತಿಯ ಭಾವನೆಗಳು ಪ್ರತಿಯೋಬ್ಬರಿಗೂ ಉಂಟಾಗುವಂತವೇ. ಇನ್ನೊಬ್ಬರಿಗೆ ಉಂಟಾದ ಭಾವನೆಗಳು ನಮ್ಮನ್ನೂ ತಟ್ಟಬಹುದು. ಯಾವುದೇ ಜೀವಿಗೆ ಉಂಟಾಗುವ ಅನುಭವಗಳು ಅಥವಾ ಸಂತೋಷ ದುಗುಡದ ಮನೋಭಾವನೆಗಳು ಪರಿಸರದಲ್ಲಿ ಉಸಿರಾಡುವ ಎಲ್ಲ ಜೀವಿಗಳನ್ನು ತಲುಪುತ್ತವೆ ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.”
ಉ: ಈ ಮೇಲಿನ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ “ಎದೆಗೆ ಬಿದ್ದ ಅಕ್ಷರ” ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ವಚನಕಾರರ ದೃಷ್ಟಿಯಲ್ಲಿ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು. ವಚನಕಾರರು ನಮ್ಮ ಸುತ್ತುಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟ ದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ತಮ್ಮ ಪ್ರಜ್ಞೆಯನ್ನೇ ದೇವರು ಅಂದುಕೊಂಡಾಗ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲ. ಬೇರೆ ಯಾವುದೇ ದೇವರ ಮುಂದೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದು. ಆದರೆ ತಮ್ಮ ಪ್ರಜ್ಞೆಯ ಮುಂದೆ ಸುಳ್ಳು ಹೇಳಲು ಸಾಧ್ಯವಾಗದು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ”
ಉ: ಈ ಮೇಲಿನ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ “ಎದೆಗೆ ಬಿದ್ದ ಅಕ್ಷರ” ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ಇಡೀ ಜೀವ ಸಂಕುಲವನ್ನೇ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು. ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು –ಅದು ಘಾಸಿಗೊಳಿಸುವುದು –ತನ್ನ ಆಳದ ಒಳ ಸಮಸ್ಟಿ ಮನಸ್ಸನ್ನೇ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಮನುಷ್ಯನು ತನ್ನಲ್ಲಿರುವ ಕ್ರೌರ್ಯದ ಮನೋಭಾವನೆಗಳನ್ನು ಕಿತ್ತೊಗೆದು ಸರ್ವರನ್ನು ಮಾನವೀಯತೆಯಿಂದ ನೋಡಬೇಕಾದುದು ಅತೀ ಅಗತ್ಯವೆಂಬ ಲೇಖಕರ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.

ಭಾಷಾ ಚಟುವಟಿಕೆ: 
ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ?
ಒಳಿತು X ಕೆಡುಕು, 
ಸಮಷ್ಟಿ X ವ್ಯಷ್ಟಿ, 
ಪುಣ್ಯ X ಪಾಪ, 
ಬೆಳಕು X ಕತ್ತಲು, 
ಧರ್ಮ X ಅಧರ್ಮ
*****


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon