ಗದ್ಯ - 3 ಶುಕನಾಸನ ಉಪದೇಶ ನೋಟ್ಸ್ | ವಿದ್ಯಾವಾಚಸ್ವತಿ ಡಾ. ಬನ್ನಂಜೆ ಗೋವಿಂದಾಚರ್ಯ | Gadya 3 Shukanasana Upadesha Notes | 10th Kannada

ಗದ್ಯಪಾಠ-3 ಶುಕನಾಸನ ಉಪದೇಶ -ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ


ಕೃತಿಕಾರರ ಪರಿಚಯ: 
ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಇವರು ಉಡುಪಿಯಲ್ಲಿ 1936ರ ಆಗಸ್ಟ್ 3ರಂದು ಜನಿಸಿದರು. ಇವರು ಸಂಸ್ಕೃತದಲ್ಲಿ 30, ಕನ್ನಡದಲ್ಲಿ 130 ಕೃತಿಗಳನ್ನು ರಚಿಸಿದ್ದಾರೆ. ವೇದೋಪನಿಷತ್ತುಗಳು ಹಾಗೂ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಕುರಿತು 30,000 ಗಂಟೆಗಳಷ್ಟು ಉಪನ್ಯಾಸ ನೀಡಿದ್ದಾರೆ. ವಿದ್ಯಾವಾಚಸ್ಪತಿ ಎನ್ನುವುದು ಇವರ ಪಾಂಡಿತ್ಯಕ್ಕೆ ಸಂದ ಬಿರುದು.
ಇವರು ಭಗವಂತನ ನಲ್ನುಡಿ, ಮುಗಿಲ ಮಾತು, ಹೇಳದೆ ಉಳಿದದ್ದು, ನೆನಪಾದಳು ಶಕುಂತಲೆ, ಮತ್ತೆ ರಾಮನ ಕತೆ, ಮಹಾಶ್ವೇತೆ, ಆವೆಯ ಮಣ್ಣಿನ ಆಟದ ಬಂಡಿ, ಋತುಗಳ ಹೆಣಿಗೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಸಂದಿವೆ. ಡಾ.ಗೋವಿಂದಾಚಾರ್ಯರು ಅಖಿಲ ಭಾರತ ಸಂಸ್ಕೃತ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಪಾಠವನ್ನು ಅವರ “ಕಾದಂಬರಿ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಕನ್ನಡಾನುವಾದ.

I. ಒಂದು ವಾಕ್ಯದಲ್ಲಿ ಉತ್ತರಿಸಿ:
1. ಹಿತವಚನವು ಮನಸ್ಸಿನ ಕೊಳೆಯನ್ನು ಹೇಗೆ ತೊಳೆಯುತ್ತದೆ?
ಉ: ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ, ಬಗೆಯ ಕೊಳೆಯನ್ನೆಲ್ಲ ಹಿತವಚನ ತೊಳೆದು ಬಿಡುತ್ತದೆ.
2. ಯಾರ ಕಿವಿಗೆ ಉಪದೇಶ ನಾಟುವುದಿಲ್ಲ?
ಉ: ರಾಜರ ಮನೆತನದಲ್ಲಿ ಹುಟ್ಟಿದವರಿಗೆ ಅಹಂಕಾರದಿಂದ ಕಿವಿ ಕಿವುಡಾಗಿ ಎಂಥ ಉಪದೇಶವೂ ಅವರಿಗೆ ನಾಟುವುದಿಲ್ಲ.
3. ಯಾರಿಗೆ ಜಗತ್ತು ಕ್ಷುದ್ರವಾಗಿ ಕಾಣುತ್ತದೆ?
ಉ: ದುಡ್ಡಿನ ಪೈತ್ಯ ಅಡರಿದವರಿಗೆ ಜಗತ್ತು ಕ್ಷುದ್ರವಾಗಿ ಕಾಣುತ್ತದೆ.
4. ಲಕ್ಷ್ಮಿ ಯಾವ ಯಾವ ದುರ್ಗುಣಗಳನ್ನು ಹೊತ್ತು ಬಂದಿದ್ದಾಳೆ?
ಉ: ಲಕ್ಷ್ಮಿಯೆಂಬ ಚಂಚಲೆ ಹಾಲುಗಡಲಿನಿಂದ ಮೇಲೆದ್ದು ಬರುವಾಗಲೇ ತನ್ನ ಜತೆಗಾರರಿಂದ ಚಂದ್ರಕಲೆಯ ವಕ್ರತೆ, ಉಚ್ಚೈಃಶ್ರವಸ್ಸಿನ ಚಾಪಲ್ಯ, ಕಾಲಕೂಟದ ಮೋಹಕತ್ವ, ಮದ್ಯದ ಮಾದಕತ್ವ, ಕೌಸ್ತುಭದ ಕಾಠಿಣ್ಯವನ್ನು ಹೊತ್ತು ತಂದಿದ್ದಾಳೆ.
5. ಸಂಪತ್ತಿನ ಗುಣವೇನು?
ಉ: ಸಂಪತ್ತಿಗೆ ಸ್ನೇಹದ ಬಂಧನವಿಲ್ಲ; ಕುಲದ ಗುರುತಿಲ್ಲ; ರೂಪದ ಒಲವಿಲ್ಲ. ಒಂದೇ ಮನೆತನದಲ್ಲಿ ಬಹುಕಾಲ ಉಳಿಯುವ ಅಭ್ಯಾಸವಂತು ಇಲ್ಲವೇ ಇಲ್ಲ.
6. ಯಾರ್ಯಾರನ್ನು ಕಂಡರೆ ಸಂಪತ್ತಿಗೆ ಆಗಿ ಬರುವುದಿಲ್ಲ?
ಉ: ವಿದ್ಯಾವಂತರು, ಗುಣವಂತರು, ವೀರರು, ಸಜ್ಜನರು, ಕುಲೀನರು, ಶೂರರು, ದಾನಶೀಲರು, ವಿನಯಶೀಲರು, ಪಂಡಿತರನ್ನು ಕಂಡರೆ ಸಂಪತ್ತಿಗೆ ಆಗಿ ಬರುವುದಿಲ್ಲ.
7. ದರ್ಭೆಯ ಚಿಗುರು ಯಾವ ಗುಣವನ್ನು ಒರೆಸಿಬಿಡುತ್ತದೆ?
ಉ: ಪುರೋಹಿತರು ಮಂತ್ರಜಲವನ್ನು ಸಿಂಪಡಿಸುವ ದರ್ಬೆಯ ಚಿಗುರು ರಾಜರ ಕ್ಷಮಾಗುಣವನ್ನು ಒರೆಸಿ ಬಿಡುತ್ತದೆ.
8. ಬೆಳ್ಗೊಡೆಯ ಅಡಿಯಲ್ಲಿ ಯಾವುದು ಕಾಣುವುದಿಲ್ಲ?
ಉ: ಬೆಳ್ಗೊಡೆಯ ಅಡಿಯಲ್ಲಿ ಪರಲೋಕ ಕಾಣಿಸುವುದಿಲ್ಲ.

II. ಕೆಳಗಿನ ಪ್ರಶ್ನೆಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ:
1. ಗುರೂಪದೇಶದ ಗುಣಗಳನ್ನು ಪಟ್ಟಿಮಾಡಿ?
ಉ: ಸಜ್ಜನರಿಗೆ ಗುರುವಚನ ಎನ್ನುವುದು ಕಿವಿಗೆ ಒಂದು ಆಭರಣ. ಅದರಿಂದ ಅವರ ಶ್ರೀಮುಖ ಇನ್ನಷ್ಟು ಶ್ರೀಮಂತವಾಗುತ್ತದೆ. ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ, ಬಗೆಯ ಕೊಳೆಯನ್ನೆಲ್ಲ ಹಿತವಚನ ತೊಳೆದುಬಿಡುತ್ತದೆ. ಆಗ ಬಾಳಿನಲ್ಲಿ ಒಂದು ಸಂಯಮ, ಒಂದು ಪಕ್ವತೆ, ಒಂದು ಶಾಂತಿ ಕಾಣಿಸಿಕೊಳ್ಳುತ್ತದೆ. ಗುರೂಪದೇಶ ಎಂದರೆ ಜನರ ಒಳ ಹೊರಗಣ ಕೊಳೆಗಳನ್ನು ತೊಳೆದುಬಿಡುವ ನೀರಿಲ್ಲದ “ಮೀಹ” ತಲೆ ನೆರೆಯದೆ, ಮೈ ಸುಕ್ಕುಗಟ್ಟದೆ ಮೂಡುವ ಮುಪ್ಪು; ಬೊಜ್ಜು ಬೆಳೆಯದೆ ಬರುವ ಗುರುತ್ವ; ಬಂಗಾರವಿಲ್ಲದೆ ಮಾಡಿದ ಬೆಲೆಬಾಳುವ ಕಿವಿಯೋಲೆ; ಪಂಜು ಇಲ್ಲದೆ ಬೆಳಗುವ ಬೆಳಕು; ಉದ್ವೇಗ ಬರಿಸದ ಜಾಗರಣೆ.

2. ಗುರೂಪದೇಶವು ಯಾರಿಗೆ ಮೆಚ್ಚಿಕೆಯಾಗುವುದಿಲ್ಲ?
ಉ: ಗುರುವಾಣಿ ಎಷ್ಟು ಪರಿಶುದ್ಧವಾಗಿದ್ದರೂ ಮೂರ್ಖನ ಕಿವಿಗೆ ಅದು ಒಂದು ಹೊರೆ. ಅಂಥವರು ಕಿವಿಯೊಳಗೆ ಹಿತವಚನ ಹೊಕ್ಕಾಗ ತಿಳಿನೀರು ಹೊಕ್ಕಂತೆ ಸಂಕಟಪಟ್ಟುಕೊಳ್ಳುತ್ತಾರೆ. ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು, ಅಹಂಕಾರದಿಂದ ಅವರ ಕಿವಿ ಕಿವುಡಾಗಿಬಿಡುತ್ತದೆ. ಎಂಥ ಉಪದೇಶವೂ ಅವರ ಕಿವಿಗೆ ನಾಟುವುದಿಲ್ಲ. ಯಾರದೋ ದಾಕ್ಷಿಣ್ಯಕ್ಕೆ ಉಪದೇಶವನ್ನು ಆಲಿಸಿದರೂ ಎಂಥ ಅನಾದರ ಆ ಮೋರೆಯಲ್ಲಿ. ಆನೆಯಂತೆ ಅರೆ ಮುಚ್ಚಿದ ಕಣ್ಣಲ್ಲಿ “ತನಗೆ ಉಪದೇಶಿಸಬೇಕಾದ್ದು ಏನೂ ಉಳಿದಿಲ್ಲ” ಎನ್ನುವಂತ ಭಾವ, ಉಪದೇಶಿಸಬಂದ ಗುರುಗಳಿಗೂ ಇದು ಒಂದು ವ್ಯಾಧಿ. ಇಂಥವರಿಗೆ ಪಾಠ ಹೇಳುವ ದೌರ್ಭಾಗ್ಯ ತಮಗೇಕೆ ಬಂತು ಎಂದು ಅವರು ನೊಂದುಕೊಳ್ಳುತ್ತಾರೆ.

3. ರಾಜರ ಪ್ರಕೃತಿ ಹೇಗಿರುತ್ತದೆ?
ಉ: ರಾಜರ ಪ್ರಕೃತಿಯೇ ಹಾಗೆ. ಅಹಂಕಾರದ ದಾಹಜ್ವರ ತಲೆಗಡರಿ ಅವರ ಬಗೆಯಲ್ಲಿ ಕತ್ತಲು ತುಂಬಿರುತ್ತದೆ. ಇದು ಎಲ್ಲ ದುಡ್ಡಿನ ಮಹಿಮೆ. ದುಡ್ಡು ದುರಭಿಮಾನದ ತವರು. ದುಡ್ಡಿನ ಪೈತ್ಯ ಅಡರಿದವರಿಗೆ ಜಗತ್ತೆಲ್ಲ ಕ್ಷದ್ರವಾಗಿ ಕಾಣುತ್ತದೆ. ರಾಜ್ಯ ಎನ್ನುವುದು ಒಂದು ವಿಷ. ಅದರ ಅಧಿಕಾರದ ಸೋಂಕು ತಾಗಿದವರಿಗೆಲ್ಲ ಬುದ್ಧಿ ಮಂಕಾಗಿಬಿಡುತ್ತದೆ.

4. ಸಂಪತ್ತನ್ನು ಕಾಪಾಡಲು ಎದುರಾಗುವ ಕಷ್ಟಗಳೇನು?
ಉ: ಹಣ ಅಥವಾ ಸಂಪತ್ತಿನಷ್ಟು ಕೆಟ್ಟ ವಸ್ತು ಜಗತ್ತಿನಲ್ಲಿ ಇನ್ನೊಂದಿಲ್ಲ. ಏಕೆಂದರೆ ಅದಕ್ಕೆ ಯಾರ ಗುರುತೂ ಇಲ್ಲ. ಸಂಪತ್ತು ಸಿಕ್ಕಿತು ಎಂದ ಮಾತ್ರಕ್ಕೆ ಸುಖವುಂಟೆ? ಅದನ್ನು ಕಾಯುವ ಕಷ್ಟ, ಕಾಪಾಡುವ ಪಾಡು ಯಾರಿಗೆ ಬೇಕು? ಎಷ್ಟು ಬಿಗಿಯಾಗಿ ಬಿಗಿದರೂ ನುಸುಳಿಕೊಳ್ಳುವಂಥ ಜಾಡು ಅದಕ್ಕೆ ತಿಳಿದಿದೆ. ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಕಾಪಿಟ್ಟ ಸಂಪತ್ತು ಕೂಡ ತನ್ನ ತಾನೆ ಕಣ್ಮರೆಯಾಗಿ ಬಿಡುತ್ತದೆ.  ಮದಜಲವನ್ನು ಸುರಿದು ಸುತ್ತಲು ಕತ್ತಲೆ ಬರಿಸುವ ಮದ್ದಾನೆಗಳ ಕಾವಲಿನಲ್ಲಿ ಕೂಡ ಕಣ್ಣು ತಪ್ಪಿಸಿ ಓಡಿಬಿಡುತ್ತದೆ.

5. ಸಂಪತ್ತು ಯಾರನ್ನು ಆಶ್ರಯಿಸುತ್ತದೆ?
ಉ: ಸಂಪತ್ತು ಸುಧೆಯ ಜೊತೆ ಕಡಲಿನಿಂದ ಹುಟ್ಟಿ ಬಂದಂತೆ. ಆದರೆ ಸ್ವಭಾವದಲ್ಲಿ ಎಂಥ ಅಂತರ! ಅಮೃತ ಸತ್ತವರನ್ನು ಬದುಕಿಸಿದರೆ ಸಂಪತ್ತು ಸೇರಿದಲ್ಲಿ ಮನುಷ್ಯತ್ವವನ್ನೇ ಕೊಲ್ಲುತ್ತದೆ. ಅದಕ್ಕಾಗಿ ಜನ ಹೊಡೆದಾಡಿಕೊಂಡು ಸಾಯುತ್ತಾರೆ. ಆದರೆ ಅದು ಯಾರ ಕಣ್ಣಿಗೂ ಕಾಣಿಸದೆ ಮೋಜು ನೋಡುತ್ತಿರುತ್ತದೆ. ಹರಿಯ ಎದೆಯಲ್ಲಿ ಸಿರಿಯ ವಾಸ ಎನ್ನುತ್ತಾರೆ. ಆದರೆ ಮೂರ್ಖರ ಎದೆಯಲ್ಲಿ ಸಂಪತ್ತಿನ ವಾಸ ಎನ್ನುವುದು ನಮಗೆ ತಿಳಿದ ಮಾತು.

6. ದುಡ್ಡಿನ ನಿಜರೂಪವೇನು?
ಉ: ದುಡ್ಡು ಆಸೆಯ ವಿಷಲತೆಗೆ ಎರೆಯುವ ನೀರು. ಇಂದ್ರಿಯಗಳೆಂಬ ಜಿಂಕೆಗಳನ್ನು ಮರುಳುಗೊಳಿಸುವ ಬೇಡನ ಸಂಗೀತ. ಒಳ್ಳೆಯ ನಡತೆಯೆಂಬ ಚಿತ್ರಕ್ಕೆ ಬಳಿದ ಮಸಿ. ಅವಿವೇಕದ ಸವಿನಿದ್ದೆಗೆ ಹಾಸಿದ ಮೆಲುಹಾಸೆ. ಅಹಂಕಾರದ ಪಿಶಾಚಿಗಳಿಗೆ ನೆಲಮನೆಯಾದ ಹಳೆಯಟ್ಟ. ಶಾಸ್ತ್ರದ ತಿಳಿವಿಗೆ ಬಿಗಿದ ಕಣ್ಪಟ್ಟಿ. ಎಲ್ಲ ದೌರ್ಜನ್ಯಗಳ ವಿಜಯಧ್ವಜ, ಕೋಪವೆಂಬ ಮೊಸಳೆಯನ್ನು ಹೊತ್ತ ಹೊಳೆ. ವಿಷಯ ಮದ್ಯಗಳ ಪಾನಭೂಮಿ, ಸಜ್ಜನಿಕೆಗೆ ಬೀಸಿದ ಬೆತ್ತ, ಒಳ್ಳೆಯತನವೆಂಬ ಕಲಹಂಸಗಳನ್ನು ಓಡಿಸುವ ಬಿರುಮಳೆ, ಸಜ್ಜನಿಕೆಯನ್ನು ಸುಡುವ ಮಸಣ. ಧರ್ಮವೆಂಬ ಚಂದ್ರಮಂಡಲವನ್ನು ಕಬಳಿಸುವ ರಾಹುವಿನ ಕರಿನಾಲಿಗೆ.

7. ಸಿರಿಯು ರಾಜರಿಗೆ ಒಲಿದರೆ ಏನೆಲ್ಲ ಅನಾಹುತಗಳಾಗುತ್ತವೆ?
ಉ: ಕೆಟ್ಟ ನಡತೆಯ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ. ಪಟ್ಟಾಭಿಷೇಕ ಕಾಲದಲ್ಲಿ ಅವರ ತಲೆಗೆ ಮಂಗಲಜಲವನ್ನು ಬಿಂದಿಗೆಯಿಂದ ಸುರಿಯುತ್ತಾರೆ. ಈ ಸಲಿಲವೆ ಅವರ ದಯೆ-ದಾಕ್ಷಿಣ್ಯಗಳನ್ನು ತೊಳೆದುಬಿಡುತ್ತದೆ. ಹೋಮದ ಹೊಗೆಯಿಂದ ಬಗೆಯೆಲ್ಲ ಮಲಿನವಾಗುತ್ತದೆ. ಪುರೋಹಿತರು ಮಂತ್ರಜಲವನ್ನು ಸಿಂಪಡಿಸುವ ದರ್ಭೆಯ ಚಿಗುರು ಅವರ ಕ್ಷಮಾಗುಣವನ್ನು ಒರೆಸಿಬಿಡುತ್ತದೆ. ತಲೆಗೆ ಬಿಗಿದ ಎಡೆಯಲ್ಲಿ ಮುಪ್ಪಿನ ನೆನಪು ಮರೆಯಾಗುತ್ತದೆ. ಬೆಳ್ಗೊಡೆಯ ಅಡಿಯಲ್ಲಿ ಪರಲೋಕ ಕಾಣಿಸುವುದಿಲ್ಲ. ದಿಟವನ್ನೇ ನುಡಿಯುವ ಬುದ್ಧಿ ಚಾಮರದ ಗಾಳಿಯಲ್ಲಿ ತೇಲಿ ಹೋಗುತ್ತದೆ. ಕುಂಚುಕಿಗಳ ಕೈಯ ಬೆತ್ತವನ್ನು ಕಂಡೇ ಸಜ್ಜನಿಕೆ ದೂರ ಸರಿಯುತ್ತದೆ. ಹೊಗಳುಭಟರ ಜಯಕಾರದ ಕೋಲಾಹಲದಲ್ಲಿ ನಲ್ನುಡಿ ಕೇಳುವ ಕಿವಿ ಕಿವುಡಾಗುತ್ತದೆ. ತೊನೆಯುವ ವಿಜಯಧ್ವಜವೆ ಯಶಸ್ಸನ್ನು ನಾಶಗೊಳಿಸುತ್ತದೆ.

III. ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:
1. ಗುರೂಪದೇಶವನ್ನು ಯಾರ್ಯಾರು ಹೇಗೆ ಸ್ವೀಕರಿಸುತ್ತಾರೆ?
ಉ: ಗುರೂಪದೇಶ ಎಂದರೆ ಜನರ ಒಳ ಹೊರಗಣ ಕೊಳೆಗಳನ್ನು ತೊಳೆದುಬಿಡುವ ನೀರಿಲ್ಲದ “ಮೀಹ” ತಲೆ ನೆರೆಯದೆ, ಮೈ ಸುಕ್ಕುಗಟ್ಟದೆ ಮೂಡುವ ಮುಪ್ಪು; ಬೊಜ್ಜು ಬೆಳೆಯದೆ ಬರುವ ಗುರುತ್ವ; ಬಂಗಾರವಿಲ್ಲದೆ ಮಾಡಿದ ಬೆಲೆಬಾಳುವ ಕಿವಿಯೋಲೆ; ಪಂಜು ಇಲ್ಲದೆ ಬೆಳಗುವ ಬೆಳಕು; ಉದ್ವೇಗ ಬರಿಸದ ಜಾಗರಣೆ.
ಗುರುವಾಣಿ ಎಷ್ಟು ಪರಿಶುದ್ಧವಾಗಿದ್ದರೂ ಮೂರ್ಖನ ಕಿವಿಗೆ ಅದು ಒಂದು ಹೊರೆ. ಅಂಥವರು ಕಿವಿಯೊಳಗೆ ಹಿತವಚನ ಹೊಕ್ಕಾಗ ತಿಳಿನೀರು ಹೊಕ್ಕಂತೆ ಸಂಕಟಪಟ್ಟುಕೊಳ್ಳುತ್ತಾರೆ. ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು ಅಹಂಕಾರದಿಂದ ಅವರ ಕಿವಿ ಕಿವುಡಾಗಿಬಿಡುತ್ತದೆ. ಎಂಥ ಉಪದೇಶವೂ ಅವರ ಕಿವಿಗೆ ನಾಟುವುದಿಲ್ಲ. ಯಾರದೋ ದಾಕ್ಷಿಣ್ಯಕ್ಕೆ ಉಪದೇಶವನ್ನು ಆಲಿಸಿದರೂ ಎಂಥ ಅನಾದರ ಆ ಮೋರೆಯಲ್ಲಿ. ಆನೆಯಂತೆ ಅರೆ ಮುಚ್ಚಿದ ಕಣ್ಣಲ್ಲಿ “ತನಗೆ ಉಪದೇಶಿಸಬೇಕಾದ್ದು ಏನೂ ಉಳಿದಿಲ್ಲ” ಎನ್ನುವಂಥ ಭಾವ, ಉಪದೇಶಿಸಬಂದ ಗುರುಗಳಿಗೂ ಇದು ಒಂದು ವ್ಯಾಧಿ. ಇಂಥವರಿಗೆ ಪಾಠ ಹೇಳುವ ದೌರ್ಭಾಗ್ಯ ತಮಗೇಕೆ ಬಂತು ಎಂದು ಅವರು ನೊಂದುಕೊಳ್ಳುತ್ತಾರೆ.

2. ಸಂಪತ್ತಿನ ಗುಣಾವಗುಣಗಳನ್ನು ವಿವರಿಸಿ?
ಉ: ಲಕ್ಷ್ಮೀಯೆಂಬ ಚಂಚಲೆ ಹಾಲುಗಡಲಿನಿಂದ ಮೇಲೆದ್ದು ಬರುವಾಗಲೇ ತನ್ನ ಜೊತೆಗಾರರಿಂದ ಹಲವೆಲ್ಲ ದುರ್ಗುಣಗಳನ್ನು ಹೊತ್ತುಕೊಂಡೆ ಬಂದಿದ್ದಾಳೆ. ಚಂದ್ರಕಲೆಯ ವಕ್ರತೆ, ಉಚ್ಛೈಃಶ್ರವಸ್ಸಿನ ಚಾಪಲ್ಯ, ಕಾಲಕೂಟದ ಮೋಹಕತ್ವ, ಮಧ್ಯದ ಮಾದಕತ್ವ, ಕೌಸ್ತುಭದ ಕಾಠಿಣ್ಯ ಈ ಎಲ್ಲ ಗುಣಗಳು ಸಂಪತ್ತಿನ ಸಹಚಾರಿಗಳು. ಸಂಪತ್ತನ್ನು ಕಾಯುವುದು, ಕಾಪಾಡುವುದು ಕಷ್ಟ. ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಕಾಪಿಟ್ಟ ಸಂಪತ್ತು ಕೂಡ ತನ್ನ ತಾನೆ ಕಣ್ಮರೆಯಾಗಿಬಿಡುತ್ತದೆ. ಸಂಪತ್ತಿಗೆ ಸ್ನೇಹದ ಬಂಧನವಿಲ್ಲ, ಕುಲದ ಗುರುತಿಲ್ಲ, ರೂಪದ ಒಲವಿಲ್ಲ. ಒಂದೇ ಮನೆತನದಲ್ಲಿ ಬಹುಕಾಲ ಉಳಿಯುವ ಅಭ್ಯಾಸವಂತೂ ಇಲ್ಲವೇ ಇಲ್ಲ. ಅದು ಸ್ವಭಾವವನ್ನು ಕಾಣದು;  ಪಾಂಡಿತ್ಯವನ್ನು ಗಳಿಸದು. ಶಾಸ್ತ್ರವನ್ನು ಆಲಿಸದು, ಧರ್ಮವನ್ನು ನಂಬದು. ಅದಕ್ಕೆ ತ್ಯಾಗದ ಮೇಲೆ ಗೌರವವಿಲ್ಲ. ತುಂಬ ಬಲ್ಲವರು ಎಂದರೆ ಆದರವಿಲ್ಲ. ಒಳ್ಳೆಯ ನಡತೆ ಅದಕ್ಕೆ ಅಪರಿಚಿತ. ಅದಕ್ಕೆ ತ್ಯಾಗದ ಮೇಲೆ ಗೌರವವಿಲ್ಲ. ಅದರ ಚಾಪಲ್ಯಕ್ಕೆ ಎಣೆಯೇ ಇಲ್ಲ. ಅದು ಕೆಲವರನ್ನು ದೊಡ್ಡಸ್ತಿಕೆಯಲ್ಲಿ ಕುಣಿಸಿಬಿಡುತ್ತದೆ. ವಿದ್ಯಾವಂತನ ಗೋಜಿಗೇ ಅದು ಬರುವುದಿಲ್ಲ. ಗುಣವಂತನನ್ನು ಕಂಡರೆ ದೂರ ಸರಿಯುತ್ತದೆ. ವೀರರು, ಸಜ್ಜನರು, ಕುಲೀನರು, ಶೂರರು, ದಾನಶೀಲರು ಇವರೆಲ್ಲ ಸಂಪತ್ತಿಗೆ ಆಗಿ ಬರುವುದಿಲ್ಲ. ವಿನಯಶೀಲರು, ಪಂಡಿತರೆಂದರೆ ಪಾತಕಿಗಳೂ ಮರುಳರೂ ಇದ್ದಂತೆ. ಸಂಪತ್ತು ದೊಡ್ಡಸ್ತಿಕೆಯ ಜೊತೆ ಕೀಳುಮಟ್ಟದ ಅಭಿರುಚಿಯನ್ನೂ ಬೆಳೆಸುತ್ತದೆ. ಸಂಪತ್ತು ಮನುಷ್ಯತ್ವವನ್ನೇ ಕೊಲ್ಲುತ್ತದೆ. ಮೂರ್ಖರ ಎದೆಯಲ್ಲಿ ಸಿರಿಯ ವಾಸ. ಸಿರಿಯಿಂದ ಮೋಸಹೋಗದವರಿಲ್ಲ.

3. ಸಂಪತ್ತಿನ ಮದವೇರಿದ ಅರಸರ ಸ್ವಭಾವ ಹೇಗಿರುತ್ತದೆ?
ಉ: ಕೆಟ್ಟ ನಡತೆಯ ಸಿರಿಯು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತದೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ. ಪಟ್ಟಾಭಿಷೇಕದ ಕಾಲದಲ್ಲಿ ಅವರ ತಲೆಗೆ ಮಂಗಲಜಲವನ್ನು ಬಿಂದಿಗೆಯಿಂದ ಸುರಿಯುತ್ತಾರೆ. ಈ ಸಲಿಲವೆ ಅವರ ದಯೆ-ದಾಕ್ಷಿಣ್ಯಗಳನ್ನೆಲ್ಲ ತೊಳೆದು ಬಿಡುತ್ತದೆ. ಹೋಮದ ಹೊಗೆಯಿಂದ ಬಗೆಯೆಲ್ಲ ಮಲಿನವಾಗುತ್ತದೆ. ಪುರೋಹಿತರು ಮಂತ್ರಜಲವನ್ನು ಸಿಂಪಡಿಸುವ ದರ್ಭೆಯ ಚಿಗುರು ಅವರ ಕ್ಷಮಾಗುಣವನ್ನು ಒರೆಸಿಬಿಡುತ್ತದೆ. ತಲೆಗೆ ಬಿಗಿದ ಪಾವುಡದ ಎಡೆಯಲ್ಲಿ ಮುಪ್ಪಿನ ನೆನಪು ಮರೆಯಾಗುತ್ತದೆ. ಬೆಳ್ಗೊಡೆಯ ಅಡಿಯಲ್ಲಿ ಪರಲೋಕ ಕಾಣಿಸುವುದಿಲ್ಲ. ದಿಟವನ್ನೇ ನುಡಿಯುವ ಬುದ್ಧಿ ಚಾಮರದ ಗಾಳಿಯಲ್ಲಿ ತೇಲಿಹೋಗುತ್ತದೆ. ಕಂಚುಕಿಗಳ ಕೈಯ ಬೆತ್ತವನ್ನು ಕಂಡೇ ಸಜ್ಜನಿಕೆ ದೂರ ಸರಿಯುತ್ತದೆ. ಹೊಗಳು ಭಟರ ಜಯಕಾರದ ಕೋಲಾಹಲದಲ್ಲಿ ನಲ್ನುಡಿ ಕೇಳುವ ಕಿವಿ ಕಿವುಡಾಗುತ್ತದೆ. ತೊನೆಯುವ ವಿಜಯಧ್ವಜವೆ ಯಶಸ್ಸನ್ನು ನಾಶಗೊಳಿಸುತ್ತದೆ.

IV. ಈ ಮಾತುಗಳ ಸಂದರ್ಭದೊಡನೆ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ:
1. ಗುರೂಪದೇಶ ಎಂದರೆ ತಲೆ ನೆರೆಯದೆ ಬರುವ ಮುಪ್ಪು.
ಉ: ಈ ಮೇಲಿನ ವಾಕ್ಯವನ್ನು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ  -ಇವರು ಬರೆದ ಕಾದಂಬರಿ ಕೃತಿಯಿಂದ ಆರಿಸಲಾದ ಶುಕನಾಸನ ಉಪದೇಶ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಗುರುವಾಣಿ ಎಷ್ಟು ಪರಿಶುದ್ಧವಾದರೂ ಮೂರ್ಖನ ಕಿವಿಗೆ ಅದು ಒಂದು ಹೊರೆ. ಸಜ್ಜನರಿಗೆ ಗುರುವಚನ ಎನ್ನುವುದು ಕಿವಿಗೆ ಒಂದು ಆಭರಣ. ಮುಸ್ಸಂಜೆಯ ಚಂದ್ರ ಕತ್ತಲೆಯನ್ನು ಕಳೆಯುವಂತೆ ಬಗೆಯ ಕೊಳೆಯನ್ನೆಲ್ಲ ಹಿತವಚನ ತೊಳೆದುಬಿಡುತ್ತದೆ. ಗುರೂಪದೇಶ ಎಂದರೆ ಜನರ ಒಳ ಹೊರಗಣ ಕೊಳೆಗಳನ್ನು ತೊಳೆದುಬಿಡುವ ನೀರಿಲ್ಲದ “ಮೀಹ” ತಲೆ ನೆರೆಯದೆ, ಮೈಸುಕ್ಕುಗಟ್ಟದೆ ಮೂಡುವ ಮುಪ್ಪು, ಬೊಜ್ಜು ಬೆಳೆಯದೆ ಬರುವ ಗುರುತ್ವ; ಬಂಗಾರವಿಲ್ಲದೆ ಮಾಡಿದ ಬೆಲೆ ಬಾಳುವ ಕಿವಿಯೋಲೆ; ಪಂಜು ಇಲ್ಲದೆ ಬೆಳಗುವ ಬೆಳಕು; ಉದ್ವೇಗ ಬರಿಸದ ಜಾಗರಣೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಗುರೂಪದೇಶದಿಂದ ವ್ಯಕ್ತಿಯಲ್ಲಿ ಹೇಗೆ ಪರಿವರ್ತನೆಯಾಗುವುದು, ಗುರೂಪದೇಶವು ಆಂತರಿಕ ಕೊಳೆಯನ್ನು ತೊಳೆದು ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಮೂಡಿಸುವುದೆಂಬುದನ್ನು, ಗುರುವಚನದಿಂದ ಬಾಳಿನಲ್ಲಿ ಸಂಯಮ, ಪಕ್ವತೆ, ಶಾಂತಿ ಮೂಡುವುದೆಂದು ಲೇಖಕರು ಇಲ್ಲಿ ವಿವರಿಸಿದ್ದಾರೆ.

2. ದುಡ್ಡು ದುರಭಿಮಾನದ ತವರು.
ಉ: ಉ: ಈ ಮೇಲಿನ ವಾಕ್ಯವನ್ನು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ  -ಇವರು ಬರೆದ ಕಾದಂಬರಿ ಕೃತಿಯಿಂದ ಆರಿಸಲಾದ ಶುಕನಾಸನ ಉಪದೇಶ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಅಹಂಕಾರದ ದಾಹಜ್ವರ ತಲೆಗಡರಿ ಅವರ ಬಗೆಯಲ್ಲಿ ಕತ್ತಲು ತುಂಬಿರುತ್ತದೆ. ಇದು ಎಲ್ಲ ದುಡ್ಡಿನ ಮಹಿಮೆ. ದುಡ್ಡು ದುರಭಿಮಾನದ ತವರು. ದುಡ್ಡಿನ ಪೈತ್ಯ ಅಡರಿದವರಿಗೆ ಜಗತ್ತೆಲ್ಲ ಕ್ಷುದ್ರವಾಗಿ ಕಾಣುತ್ತದೆ. ರಾಜ್ಯ ಎನ್ನುವುದು ಒಂದು ವಿಷ. ಅದರ ಅಧಿಕಾರದ ಸೋಂಕು ತಾಗಿದವರಿಗೆಲ್ಲ ಬುದ್ಧಿ ಮಂಕಾಗಿ ಬಿಡುತ್ತದೆ ಎಂದು ವಿವರಿಸುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ದುಡ್ಡಿನ ಮದ ಏರಿದವರಿಗೆ ದುರಹಂಕಾರ, ದುರಭಿಮಾನಗಳು ಸೇರಿ ಅದರ ಮುಂದೆ ಉಳಿದೆಲ್ಲವೂ ಗೌಣವಾಗುತ್ತದೆ ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

3. “ಸಂಪತ್ತು ಸಿಕ್ಕಿತು ಎಂದ ಮಾತ್ರಕ್ಕೆಯೆ ಸುಖವುಂಟೆ.” 
ಉ: ಈ ಮೇಲಿನ ವಾಕ್ಯವನ್ನು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ  -ಇವರು ಬರೆದ ಕಾದಂಬರಿ ಕೃತಿಯಿಂದ ಆರಿಸಲಾದ ಶುಕನಾಸನ ಉಪದೇಶ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಹಣದಷ್ಟು ಕೆಟ್ಟ ವಸ್ತು ಈ ಜಗತ್ತಿನಲ್ಲಿ ಇಲ್ಲ. ಏಕೆಂದರೆ ಅದಕ್ಕೆ ಯಾರ ಗುರುತೂ ಇಲ್ಲ. ಸಂಪತ್ತು ಸಿಕ್ಕಿತು ಎಂದ ಮಾತ್ರಕ್ಕೆಯೆ ಸುಖವುಂಟೆ? ಅದನ್ನು ಕಾಯುವ ಕಷ್ಟ, ಕಾಪಾಡುವ ಪಾಡು ಯಾರಿಗೆ ಬೇಕು? ಎಷ್ಟು ಬಿಗಿಯಾಗಿ ಬಿಗಿದರೂ ನುಸುಳಿಕೊಳ್ಳುವಂಥ ಜಾಣ್ಮೆ ಅದಕ್ಕೆ ತಿಳಿದಿದೆ. ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಕಾಪಿಟ್ಟ ಸಂಪತ್ತು ಕೂಡ ತನ್ನ ತಾನೆ ಕಣ್ಮರೆಯಾಗಿಬಿಡುತ್ತದೆ. ಮದಜಲವನ್ನು ಸುರಿದು ಸುತ್ತೆಲ್ಲ ಕತ್ತಲು ಬರಿಸುವ ಮದ್ದಾನೆಗಳ ಕಾವಲಿನಲ್ಲಿ ಕೂಡ ಕಣ್ಣು ತಪ್ಪಿಸಿ ಓಡಿಬಿಡುತ್ತದೆ ಎನ್ನುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಸಂಪತ್ತು ನಮ್ಮ ಜೊತೆಯಿದ್ದ ಮಾತ್ರಕ್ಕೆ ಸುಖ ಜೊತೆಗಿದ್ದಂತೆ ಎಂಬ ಭಾವನೆ ಬೇಡ. ಅದನ್ನು ಕಾಪಾಡಿಕೊಳ್ಳುವುದೂ ಕೂಡ ಅಷ್ಟೇ ಕಷ್ಟ ಎನ್ನುವುದು ಲೇಖಕರ ಅಭಿಪ್ರಾಯವಾಗಿದೆ.

4. ಸಂಪತ್ತಿನಿಂದ ದೊಡ್ಡವರು ಎನಿಸಿಕೊಂಡವರಲ್ಲಿ ಇರುವಷ್ಟು ದೌರ್ಬಲ್ಯ, ಸಣ್ಣತನ ಇನ್ನೊಂದೆಡೆ ಇರಲಾರದು.
ಉ: ಉ: ಈ ಮೇಲಿನ ವಾಕ್ಯವನ್ನು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ  -ಇವರು ಬರೆದ ಕಾದಂಬರಿ ಕೃತಿಯಿಂದ ಆರಿಸಲಾದ ಶುಕನಾಸನ ಉಪದೇಶ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ದುಡ್ಡಿನ ಬಿಸಿ ಬಗೆಯಲ್ಲಿ ಜಾಡ್ಯವನ್ನು ತುಂಬುತ್ತದೆ. ದೊಡ್ಡಸ್ತಿಕೆಯ ಜತೆಗೆಯೇ ಕೀಳುಮಟ್ಟದ ಅಭಿರುಚಿಯನ್ನು ಬೆಳೆಸುತ್ತದೆ. ಸಂಪತ್ತು ಬೆಳೆದಷ್ಟು ದುಡ್ಡಿನ ಹಸಿವೂ ಹೆಚ್ಚುತ್ತದೆ. ಐಶ್ವರ್ಯ ಬೆಳೆದಂತೆಯೇ ದುರ್ಗುಣಗಳೂ ಬೆಳೆಯುತ್ತಿರುತ್ತವೆ ಎನ್ನುವಾಗ ಲೇಖಕರು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ಐಶ್ವರ್ಯವು ಮನುಷ್ಯನಲ್ಲಿ ಸಣ್ಣತನವನ್ನೂ ದೌರ್ಬಲ್ಯವನ್ನೂ ಬೆಳೆಸುವುದು, ದುಡ್ಡು ಹೆಚ್ಚಾದಂತೆಲ್ಲ ಮನುಷ್ಯ ತನ್ನಲ್ಲಿನ  ಒಳ್ಳೆಯ ಗುಣಗಳನ್ನು ಕಳೆದುಕೊಂಡು ದುರ್ಗುಣಗಳನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾನೆ ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

V. ಈ ಕೆಳಗಿನ ಪದಗಳ ವಚನ ಬದಲಾಯಿಸಿ ಬರೆಯಿರಿ?
ಕಿವಿಯೋಲೆ, ಕತ್ತಿಗಳು, ಹಾವು, ಬಿಂದಿಗೆಗಳು, ಹೊಗಳುಭಟರು.
ಕಿವಿಯೋಲೆ - ಕಿವಿಯೋಲೆಗಳು, 
ಕತ್ತಿಗಳು – ಕತ್ತಿ,  
ಹಾವು - ಹಾವುಗಳು, 
ಬಿಂದಿಗೆಗಳು -ಬಿಂದಿಗೆ, 
ಹೊಗಳುಭಟರು – ಹೊಗಳುಭಟ.

VI. ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ?
ತಲೆಗಡರಿ, ಗುರೂಪದೇಶ, ಹಾಲುಗಡಲು, ಪಟ್ಟಾಭಿಷೇಕ 
ತಲೆಗೆ + ಅಡರಿ = ತಲೆಗಡರಿ = ಲೋಪಸಂಧಿ
ಗುರು + ಉಪದೇಶ = ಗುರೂಪದೇಶ = ಸವರ್ಣದೀರ್ಘಸಂಧಿ
ಹಾಲು + ಕಡಲು = ಹಾಲುಗಡಲು = ಆದೇಶಸಂಧಿ
ಪಟ್ಟ + ಅಭಿಷೇಕ = ಪಟ್ಟಾಭಿಷೇಕ = ಸವರ್ಣದೀರ್ಘಸಂಧಿ

VII. ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ?
1. ಹಂಪಿಯಲ್ಲಿನ ದೇವಾಲಯ ನೋಡಿಕೊಂಡು ಬಂದೆವು. (ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ)
ಉ: ಹಂಪಿಯಲ್ಲಿನ ದೇವಾಲಯ ನೋಡಿಕೊಂಡು ಬರುವೆವು.
2. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು. (ವರ್ತಮಾನ ಕಾಲಕ್ಕೆ ಪರಿವರ್ತಿಸಿ)
ಉ: ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ.
3. ಹೆಜ್ಜೆಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ. (ಭೂತಕಾಲಕ್ಕೆ ಪರಿವರ್ತಿಸಿ)
ಉ: ಹೆಜ್ಜೆಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.(ದೊರೆತಿವೆ)

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon