ಗದ್ಯ - 1 ಶಬರಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಹತ್ತನೇ ತರಗತಿ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | ಪು ತಿ ನ

ಗದ್ಯ - 1 ಶಬರಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಹತ್ತನೇ ತರಗತಿ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು |


ಗದ್ಯ ಪಾಠ ೧. ಶಬರಿ -ಪು.ತಿ.ನ.
ಕೃತಿಕಾರರ ಪರಿಚಯ:
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಕ್ರಿ.ಶ. 1905ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರು ಅಹಲ್ಯೆ, ಶಬರಿ, ವಿಕಟಕವಿವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.
ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
ಪ್ರಸ್ತುತ ಶಬರಿ ಗೀತನಾಟಕವನ್ನು ಶ್ರೀರಂಗ ಮತ್ತು ನಾ.ಕಸ್ತೂರಿಯವರು ಸಂಪಾದಿಸಿದ ಏಕಾಂಕ ನಾಟಕಗಳು ಕೃತಿಯಿಂದ ಆಯ್ದುಕೊಳ್ಳಲಾಗಿದೆ.
I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಶ್ರೀರಾಮನ ತಂದೆಯ ಹೆಸರೇನು?
ಉ: ಶ್ರೀರಾಮನ ತಂದೆಯ ಹೆಸರು ದಶರಥ.
2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಉ: ಶ್ರೀರಾಮನಿಗೆ ಸಮರ್ಪಿಸಲು ಶಬರಿ ತಳಿರು ಹೂ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.
3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಉ: ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
4. ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಉ: ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು.
5. ಶಬರಿ ಗೀತ ನಾಟಕದ ಕರ್ತೃ ಯಾರು?
ಉ: ಶಬರಿ ಗೀತ ನಾಟಕದ ಕರ್ತೃ ಪು.ತಿ.ನರಸಿಂಹಾಚಾರ್.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ಉ: ದೊರೆವಳೇ ಸೀತೆ | ಭೂಮಿಜಾತೆ ಆತ್ಮಕಾಮಕಲ್ಪಲತೆ ದೊರೆವಳೇ ಚೆಲುವೆ? ಎರೆವೆ ಎರೆವೆ ಗಿರಿವನವೇ, ಪೇಳಿರಿ ನಾನೆರೆವೆ ದೊರಿವಳೇ? ದೊರೆಯಳೇ? ಅವಳ ನೆಲೆ ಯಾರು ಅರಿಯಿರೇ,ಪೇಳಿ ಎನ್ನರಸಿ ದೊರೆಯಳೇ? ಈ ಬೇಗೆ ಕೆಡದಲಾ | ನನ್ನೆದೆಯ ಬಿಡದಲಾ ಈ ಜಗವ ಸುಡದಲಾ | ಹಾ! ಹಾ! ಹಾ! ಎಂದು ರಾಮನು ಗಿರಿವನವನ್ನು ಪ್ರಾರ್ಥಿಸಿದನು.
2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಉ: ತಾಳಿಕೋ ಅಣ್ಣ ತಾಳಿಕೋ | ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು? ಚಿತ್ರಕೂಟದಲ್ಲಿದ್ದ ಸಂದರ್ಭದಲ್ಲಿ ನಾನು ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದರಿಂದ ಈ ಗತಿ ಒದಗಿತು. ನಾನು ಹಾಗೆ ಮಾಡಬಾರದಾಗಿತ್ತು ಎಂದು ಹೇಳುತ್ತ ಲಕ್ಷ್ಮಣನು  ರಾಮನನ್ನು ಸಂತೈಸಿದನು.
3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಉ: ಶಬರಿ ಪ್ರತಿದಿನವೂ ರಾಮ ಬರುವನೆಂದು ಅವನಿಗಾಗಿ ಒಳ್ಳೆಯ ಸಿಹಿಯಾದ ಹಣ್ಣುಗಳನ್ನು ಆಯ್ದು ತರುವಳು. ಒಳ್ಳೆಯ ಸುವಾಸನೆಭರಿತ ಹೂವುಗಳನ್ನು ಹುಡುಕಿ ತಂದು ರಾಮನಿಗಾಗಿ ಮಾಲೆಯನ್ನು ಸಿದ್ಧಪಡಿಸುವಳು. ಮಧುಪರ್ಕವನ್ನು ರಾಮನಿಗಾಗಿ ಅಣಿಗೊಳಿಸುವಳು. ರಾಮನಿಗೆ ಅರ್ಪಿಸಲು ಅಣಿಗೊಳಿಸಿದ ಹೂ ಹಣ್ಣುಗಳನ್ನು ಅವನಿಗೆ ಅರ್ಪಿಸಲಾಗದೇ ವ್ಯರ್ಥವಾದುದರ ಕುರಿತು ಚಿಂತಿಸುತ್ತ ಮತ್ತೆ ಅವನಿಗೆ ಅರ್ಪಿಸಲು ಪ್ರತಿದಿನವೂ ಹೊಸತನ್ನು ಆಯ್ದುತರುವಳು. ರಾತ್ರಿಯ ಕತ್ತಲನ್ನು ಹೋಗಲಾಡಿಸುವ ಚಂದ್ರನೇ ರಾಮಾ ಬಾ, ನೀನು ಬಂದು ಈ ಹಣ್ಣುಗಳನ್ನು ಸೇವಿಸದೇ ನನಗೇನೂ ಸೇರದು ಎಂದು ರಾಮನ ಸ್ವಾಗತಕ್ಕಾಗಿ ಕಾಯುವಳು.
4. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ?
ಉ: ರಾಮಲಕ್ಷ್ಮಣರನ್ನು ನೋಡಿದ ಶಬರಿಯು ಕ್ಷಣಹೊತ್ತು ಬೆರಗಾದಳು. ಬೆರಗು ಕಳೆದ ಅವನ ಸನಿಹ ಹೋಗಿ ಮೈಯನ್ನು ಸ್ಪರ್ಷಿಸಿ, ಪಾದಕ್ಕೆರಗಿ ಕೈಯನ್ನು ಕಣ್ಣಿಗೊತ್ತಿಕೊಂಡು ಕಂಬನಿಗರೆದಳು. ಬನ್ನಿರಿ ಎಂದು ಗದ್ಗದಿಸುತ್ತ ಅವನನ್ನು ಉಪಚರಿಸಲು ಅವಳು ಮಾಡಿದ ಸಿದ್ಧತೆ ಸಾಲದೆಂದು ಮರುಗಿದಳು. ಪರಿಮಳವನ್ನು ಸೂಸುವ ವಿವಿಧ ಹೂವುಗಳಿಂದ ಕಟ್ಟಲಾದ ವನಮಾಲೆಯನ್ನು ಕೊರಳಿಗಿಟ್ಟು ಹಿಗ್ಗಿದಳು. ತಾನು ರಾಮನಿಗೆಂದು ತಂದಿರುವ ಹಣ್ಣಿನಷ್ಟು ರುಚಿಯಾದ ಹಣ್ಣು ಈ ಜಗದಲ್ಲಿಯೇ ಇಲ್ಲವೆಂದು, ನಿಮಗಾಗಿಯೇ ಇದನ್ನು ತಂದಿರುವೆನೆಂದು ಅವರಿಗಿತ್ತು ಉಪಚರಿಸುವಳು.
5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಉ: ನಿನ್ನ ಆದರಾತಿಥ್ಯದಿಂದ ನಾವು ಸಂತೃಪ್ತರು. ನಿನ್ನ ಸುಖದಲ್ಲಿಯೇ ನಾವು ಸುಖಿಗಳು. ಈ ಕಾಡಿನಲ್ಲಿಯೇ ಜೀವನದ ಸಂತೃಪ್ತಿ ಕಾಣುವ ನಿನ್ನ ಪುಣ್ಯಕ್ಕೆ ನಾವೂ ನಿನಗೆ ಋಣಿಗಳಾಗಿದ್ದೇವೆ ಎಂದು ತಮ್ಮನ್ನು ಉಪಚರಿಸಿದ ಶಬರಿಗೆ ರಾಮನು ನುಡಿದಾಗ ಈ ಬಡವಿಯ ಬಗ್ಗೆ ಮರುಕವೇ ಎಂದು ಶಬರಿ ಪ್ರಶ್ನಿಸುವಳು. ಆಗ ರಾಮನು ನಿನ್ನ ಸೇವೆಯಲ್ಲಿ ಸ್ವಲ್ಪವೂ ಕೊರತೆಯಿಲ್ಲ. ಅಯೋಧ್ಯೆಯ ಅರಮನೆಯಲ್ಲಿ ಪಡೆದದ್ದಕ್ಕಿಂತ ಹೆಚ್ಚಿನ ಸತ್ಕಾರ ನಿನ್ನಿಂದ ದೊರೆಯಿತು. ಇದರಿಂದ ನಾವು ಕಾಡನ್ನೇ ಮರೆತು ಇದೇ ಮನೆಯೆಂದು ತಿಳಿದು ಇಷ್ಟು ಆದರ ಪ್ರೀತಿ ತೋರಿದ ನಿನ್ನಲ್ಲೇ ಮಾತೃಸ್ವರೂಪವನ್ನು ನೋಡಿದೆವು ಎಂದು ಹೇಳಿದನು.

III. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ?
ಉ: ಮತಂಗ ಮಹರ್ಷಿಗಳಿಂದ ರಾಮನ ದರ್ಶನದಿಂದಲೇ ಮೋಕ್ಷ ಸಿದ್ಧಿ ಎಂಬ ವರವನ್ನು ಪಡೆದಿದ್ದ ಶಬರಿ ರಾಮನ ಬರುವಿಕೆಗಾಗಿ ಕಾದಿದ್ದಳು. ಶಬರಿಯ ಎಷ್ಟೋ ವರ್ಷಗಳ ಕಾಯುವಿಕೆಯ ತಪಸ್ಸು ಕೊನೆಗೂ ಈಡೇರುವಂತೆ ರಾಮನ ದರ್ಶನದ ದಿನ ಸಮೀಪಿಸಿತು. ರಾಮ ಬರುವನೆಂದು ಶಬರಿ ಹೂ ಹಣ್ಣುಗಳನ್ನು ತಂದು ದಿನವೂ ಕಾಯುತ್ತಿದ್ದಳು. ಅಂತೂ ಶಬರಿಯ ಆಸೆ ಪೂರೈಸಲೋ ಎಂಬಂತೆ ಸೀತೆಯನ್ನರಸುತ್ತ ರಾಮ ಲಕ್ಷ್ಮಣ ಸಮೇತನಾಗಿ ಮತಂಗಾಶ್ರಮಕ್ಕೆ ಬಂದನು. ಅಲ್ಲಿ ತನಗಾಗಿ ಕಾದಿದ್ದ ಶಬರಿಯು ನೀಡಿದ ಹೂ ಹಣ್ಣುಗಳ ಸೇವೆ ಉಪಚಾರದಿಂದ ರಾಮ ಸಂತಸಭರಿತನಾದನು. ರಾಮನ ದರ್ಶನದಿಂದ ಶಬರಿಗೆ ಪರಮಾನಂದವಾಯಿತು. ನಾನು ಸುಖಿ ಪರಮ ಸುಖಿ, ಇಂದೆನಗೆ ಬಲು ಸಂತಸವಾಗಿದೆ ಎಂದು ಹಿಗ್ಗಿಹಾಡುವಳು. ರಾಮನ ದಿವ್ಯದರ್ಶನ, ವಿನಯಾದರ ತುಂಬಿದ ಮಾತುಗಳನ್ನು ಕೇಳಿ ಶಬರಿ ತಾನು ಧನ್ಯಳಾದೆನೆಂದು, ರಾಮನ ದರ್ಶನದ ಪುಣ್ಯ ಲಭಿಸಿ ತನ್ನ ಚಿಂತೆಯೆಲ್ಲ ಇಂಗಿ ಹೋಯಿತೆಂದು ಧನ್ಯತಾಭಾವವನ್ನು ತಾಳಿದಳು.

2. ಶಬರಿಯ ಸಡಗರ, ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ಉ: ಸೀತೆಯನ್ನರಸುತ್ತ ರಾಮಲಕ್ಷ್ಮಣರು ಮತಂಗಾಶ್ರಮದ ಬಳಿ ಶಬರಿಯಿರುವಲ್ಲಿಗೆ ಬರುತ್ತಾರೆ. ರಾಮ ಬಂದು ಎದುರಿಗೆ ನಿಂತಿರುವುದನ್ನು ನೋಡಿದ ಶಬರಿ ಬೆರಗಾದಳು. ಬಳಿಕ ಸಾವರಿಸಿಕೊಂಡು ಅವನ ಸನಿಹ ಬಂದು ಅವನ ಮೈಯನ್ನು ಸ್ಪರ್ಷಿಸಿದಳು. ಅವನ ಕಾಲಿಗೆ ಬಿದ್ದು ನಮಸ್ಕರಿಸಿದಳು. ರಾಮನ ಕೈಗಳನ್ನು ಕಣ್ಣಿಗೊತ್ತಿಕೊಂಡು ಕಣ್ಣೀರು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತ ಒಳ ಕರೆದು ಆದರಿಸಿದಳು. ಅಯ್ಯೋ, ಏನೂ ಸಿದ್ಧತೆಯೇ ಇಲ್ಲ, ನಿನ್ನೆಯಷ್ಟು ಚೆನ್ನಾಗಿರುವ ಹೂ ಹಣ್ಣುಗಳು ದೊರೆತೇ ಇಲ್ಲ ಎಂದು ತಳಮಳಿಸಿದಳು. ತನ್ನ ಮನದ ಬಯಕೆಯಂತೆ ಸುಮಧುರ ಪರಿಮಳ ಬೀರುವ ಹೂಗಳ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ನಲಿದಳು. ಇಷ್ಟು ರುಚಿಯಾಗಿರುವ ಹಣ್ಣು  ಜಗತ್ತಿನಲ್ಲಿಯೇ ಇಲ್ಲ ಎಂದು ನಿಮಗೋಸ್ಕರವಾಗಿಯೇ ತಂದೆನೆಂದು ಅವರ ಕೈಯೊಳಗಿತ್ತು ಆದರಿಸಿದಳು. ರಾಮ ಲಕ್ಷ್ಮಣರು ಶಬರಿಯ ಆತಿಥ್ಯದಿಂದ ಸಂತೃಪ್ತರಾದಾಗ ಅವಳಲ್ಲಿ ಧನ್ಯತಾಭಾವ ಮೂಡುವುದು.

3. ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಉ: ಮತಂಗರ ಆಶ್ರಮದಲ್ಲಿದ್ದ ಶಬರಿಯು ನಿಷ್ಠೆಯಿಂದ ಅವರಿಗೆ ಸಲ್ಲಿಸಿದ ಸೇವೆಯ ಫಲವಾಗಿ ಶ್ರೀರಾಮನ ದರ್ಶನದಿಂದ ಅವಳಿಗೆ ಮುಕ್ತಿ ಎಂಬ ವರವನ್ನು  ಅವರಿಂದ ಪಡೆದಿದ್ದಳು. ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳಾಗಿದ್ದಳು. ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು. ಪ್ರತಿದಿನವೂ ಹೊಸ ಹೂ ಹಣ್ಣುಗಳನ್ನು ತಂದು ರಾಮನು ಬಂದಾಗ ಅವನಿಗೆ ಅರ್ಪಿಸಬೇಕೆಂದು ಕಾಯುತ್ತಿದ್ದಳು. ರಾಮ ಬಾರದೇ ತನಗೇನೂ ತೋರದೆಂದು, ಅವನು ಸವಿದಲ್ಲದೇ ಈ ಹಣ್ಣುಗಳು ಸವಿಯಾಗದೆಂದು ಪರಿತಪಿಸುತ್ತಿದ್ದಳು. ಸೀತಾಪಹರಣದ ನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಿರುವಾಗ ತಪಸ್ವಿಗಳಾದ ಧನು ಎಂಬುವರ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಅಲ್ಲಿ ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತಿದ್ದ ಶಬರಿಯನ್ನು ದರ್ಶಿಸುತ್ತಾರೆ. ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸಿ ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸುವನು. ಹೀಗೆ ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಗಿ ಪರಿಣಮಿಸಿತು.

IV. ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. “ಆವುದೀ ಮರುಳು? ನಮ್ಮೆಡೆಗೆ ಬರುತಿಹುದು.”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ “ಶಬರಿ” ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬರಿಯನ್ನು ನೋಡಿದ ರಾಮನು ಲಕ್ಷ್ಮಣನಿಗೆ ಹೇಳಿದನು.
ಸಂದರ್ಭ: ಮತಂಗಾಶ್ರಮದಲ್ಲಿ ರಾಮನ ದರ್ಶನಕ್ಕಾಗಿ ಶಬರಿ ಕಾಯುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿಯೇ ಸೀತೆಯನ್ನು ಕಳೆದುಕೊಂಡಿದ್ದ ರಾಮನು ಲಕ್ಷ್ಮಣನೊಂದಿಗೆ ಅವಳನ್ನು ಅರಸತ್ತ ಆ ಆಶ್ರಮದ ಸಮೀಪಕ್ಕೆ ಬರುತ್ತಾನೆ. ರಾಮನು ಸೀತೆಗಾಗಿ ಹಂಬಲಿಸುತ್ತ ಶೋಕಿಸುತ್ತಿರುವಾಗ ಲಕ್ಷ್ಮಣನು ಅವನನ್ನು ಸಮಾಧಾನಿಸುವನು. ತನ್ನಿಂದಲೇ ಸೀತೆಗೆ ಈ ದುರ್ಗತಿ ಬಂತೆಂದೂ ತಾನೂ ದುಃಖಿಸುವನು. ಆಗ ರಾಮನು ಅವನನ್ನು ಸಮೀಪಿಸುತ್ತ ದನು ಹೇಳಿದ ದಾರಿಯಲ್ಲಿಯೇ ನಾವು ಬಂದಿರುವೆವೋ ಇಲ್ಲವೋ, ಇದು ಶ್ರಮಣಿಯಾಶ್ರಮವೇ ಎಂದು ಆಲೋಚಿಸುತ್ತಿರುವಾಗ ತಮ್ಮೆಡೆಗೆ ಬರುತ್ತಿರುವ ಶಬರಿಯನ್ನು ನೋಡಿ ಮೇಲಿನಂತೆ ಹೇಳುವನು.
ಸ್ವಾರಸ್ಯ: ರಾಮನ ದರ್ಶನಕ್ಕಾಗಿ ಪರಿತಪಿಸುತ್ತಿರುವ ಶಬರಿಗೆ ತನ್ನ ಪರಿವಿರದೇ ಕೇವಲ ರಾಮನ ಕಾಣುವ ಹಂಬಲ. ಮರುಳಳಂತೆ ಕಾಣುವ ಶಬರಿಯನ್ನು ದೂರದಿಂದ ಗಮನಿಸಿದ ರಾಮನ ಕುತೂಹಲದ ಪ್ರಶ್ನೆ ಇದಾಗಿದೆ.

2. “ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ.”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ “ಶಬರಿ” ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬರಿಯನ್ನು ನೋಡಿದ ರಾಮನು ಲಕ್ಷ್ಮಣನಿಗೆ ಹೇಳಿದನು.
ಸಂದರ್ಭ: ಮತಂಗಾಶ್ರಮದಲ್ಲಿ ಶಬರಿ ರಾಮನ ಆಗಮನಕ್ಕಾಗಿ ಕಾಯುತ್ತಿರುತ್ತಾಳೆ. ಹೂ ಹಣ್ಣು ಹಂಪಲುಗಳನ್ನು ತಂದು ರಾಮನನ್ನು ಸತ್ಕರಿಸಬೇಕೆಂಬ ಅಪೇಕ್ಷೆಯಲ್ಲಿ ಶಬರಿ ಕಾತರಿಸುತ್ತಿದ್ದ ಸಂದರ್ಭದಲ್ಲಿಯೇ ದನುವಿನ ಹೇಳಿಕೆಯಂತೆ ಸೀತೆಯನ್ನು ಅರಸುತ್ತ ರಾಮಲಕ್ಷ್ಮಣರು ಆಶ್ರಮದ ಸಮೀಪ ಬರುತ್ತಾರೆ. ಶಬರಿ ರಾಮನನ್ನು ಉಪಚರಿಸುವ ಉತ್ಸುಕತೆಯಿಂದ ಕಾದಿರುವುದನ್ನು ನೋಡಿ ರಾಮನು ಲಕ್ಷ್ಮಣನಿಗೆ ದನುವು ಹೇಳಿದ ಶಬರಿ ಇವಳೇ ಇರಬಹುದೆಂದು ಈಕೆಗೆ ನನ್ನಿಂದ ಯಾವುದೇ ಉಪಕಾರವಿಲ್ಲದಿದ್ದರೂ ನನ್ನನ್ನು ನೆನೆಯುತಿಹಳೆಂದು, ಇವಳ ಪ್ರೀತಿಗೆ ನಾಚುತಿಹೆನೆಂದು ಮೇಲಿನಂತೆ ನುಡಿಯುತ್ತಾನೆ.
ಸ್ವಾರಸ್ಯ: ಹಲವಾರು ವರ್ಷಗಳಿಂದ ರಾಮನಿಗಾಗಿ ಕಾಯುತ್ತಿದ್ದ ಶಬರಿಯು ರಾಮ ಲಕ್ಷ್ಮಣರ ಆಗಮನದಿಂದ ಹರ್ಷಿತಳಾಗಿ ಅವರನ್ನು ಉಪಚರಿಸುತ್ತಾಳೆ. ವೃದ್ಧಾಪ್ಯದ ಉತ್ತುಂಗ ಸ್ಥಿತಿಯಲ್ಲಿದ್ದರೂ, ಕಾಡಿನ ಮಧ್ಯೆ ರಾಮಲಕ್ಷ್ಮಣರನ್ನು ಉಪಚರಿಸಿದ ಶಬರಿಯ ಭಕ್ತಿಭಾವ ನೋಡಿ ಸಂಕೋಚ ತಾಳುವ ರಾಮನ ಮನಸ್ಥಿತಿ ಇಲ್ಲಿ ವ್ಯಕ್ತವಾಗಿದೆ.

3. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ “ಶಬರಿ” ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬರಿಯನ್ನು ನೋಡಿದ ರಾಮನು ಶಬರಿಗೆ ಕೇಳಿದನು.
ಸಂದರ್ಭ: ಮತಂಗ ಋಷಿಯ ಆಶ್ರಮದಲ್ಲಿ ರಾಮನ ದರ್ಶನಕ್ಕಾಗಿ ಹಂಬಲಿಸುತ್ತ ಶಬರಿ ರಾಮನಿಗೆ ಕೊಡಲು ತಂದಿರಿಸಿದ ಹೂ ಹಣ್ಣುಗಳು ಅವನನ್ನು ತಲುಪದೇ ಹೋದುದಕ್ಕೆ ಬೇಸರಿಸುತ್ತ ಪುನಃ ಪುನಃ ಹೊಸತನ್ನು ಆರಿಸಿ ತಂದು ರಾಮನಿಗೆ ಕೊಡಲು ಕಾತರಿಸುತ್ತಿರುತ್ತಾಳೆ. ರಾಮನ ಗುಣಗಾನ ಮಾಡುತ್ತ ಅವನಿಗಾಗಿ ಕಟ್ಟಿದ ಮಾಲೆಗೆ ಮುದ್ದಿಕ್ಕುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ರಾಮನು ಶಬರಿಯನ್ನು ಕುರಿತು ಮೇಲಿನಂತೆ ಪ್ರಶ್ನಿಸುವನು.
ಸ್ವಾರಸ್ಯ: ಸೀತೆಯನ್ನು ಅರಸುತ್ತಿದ್ದ ಶ್ರೀರಾಮ ಲಕ್ಷ್ಮಣರು ಧನುವಿನ ಹೇಳಿಕೆಯಂತೆ ಮತಂಗಾಶ್ರಮದ ಮಾರ್ಗವಾಗಿ ಬಂದಾಗ ಅಲ್ಲಿ ರಾಮನಿಗಾಗಿ ಹಂಬಲಿಸುತ್ತಿದ್ದ ಶಬರಿಯನ್ನು ನೋಡಿ ರಾಮನು ಮೇಲಿನಂತೆ ಕೇಳುವುದು, ರಾಮನ ವಿನಯದಿಂದ ಕೂಡಿದ ನಡವಳಿಕೆ ಇಲ್ಲಿ ವ್ಯಕ್ತವಾಗಿರುವುದನ್ನು ಗಮನಿಸಬಹುದು.

4. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ.”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ “ಶಬರಿ” ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬರಿ ರಾಮನ ಕುರಿತು ಹೇಳಿದ್ದಾಳೆ.
ಸಂದರ್ಭ: ತನ್ನ ಆಶ್ರಮಕ್ಕೆ ಆಗಮಿಸಿದ ರಾಮಲಕ್ಷ್ಮಣರನ್ನು ಅತ್ಯಾದರದಿಂದ ಬರಮಾಡಿಕೊಂಡ ಶಬರಿಯು ಹೂ ಹಣ್ಣುಗಳನಿತ್ತು ಉಪಚರಿಸಿದಳು. ಅವಳ ಉಪಚಾರದಿಂದ ರಾಜಕುಮಾರರು ಪ್ರಸನ್ನರಾದರು. ಆಗ ಶಬರಿಯು ತನ್ನ ಎಷ್ಟೋ ವರ್ಷಗಳ ತಪಸ್ಸು ಫಲಿಸಿತು. ರಾಮನ ದರ್ಶನದಿಂದ ತಾನು ಸುಖಿಯಾದೆನು ಎಂದು ಹಾಡುವಳು. ರಾಮನು ನಿನ್ನ ಪ್ರೀತಿಗೆ ನಾವು ಋಣಿಯಾಗಿದ್ದೇವೆ. ಅಯೋಧ್ಯೆಯ ಅರಮನೆಯಲ್ಲಿ ಸಿಗುವ ಆದರಕ್ಕಿಂತಲೂ ಮಿಗಿಲಾದ ಆದರ ಇಲ್ಲಿ ಸಿಕ್ಕಿತು, ನಿನ್ನಲ್ಲೇ ತಾಯಿಯನ್ನು ಕಾಣುತ್ತಿದ್ದೇವೆ ಎಂದಾಗ ಶಬರಿ ರಾಮನ ಭವ್ಯ ವ್ಯಕ್ತಿತ್ವವನ್ನು ಮೇಲಿನಂತೆ ಕೊಂಡಾಡುವಳು.
ಸ್ವಾರಸ್ಯ: ಕಾಡಿನಲ್ಲಿದ್ದರೂ ನೆಮ್ಮದಿ ಕಾಣುವ ಶಬರಿಯು ತಮಗೆ ಮಾಡಿದ ಉಪಚಾರವನ್ನು ಮೆಚ್ಚುವ ರಾಮನು ಶಬರಿಯಲ್ಲಿ ತಾಯಿಯನ್ನು ಕಾಣುವೆನೆಂದಾಗ ಶಬರಿಯು ಮೇಲಿನಂತೆ ಹೇಳುವಳು. ಬಾಹ್ಯ ಮತ್ತು ಅಂತರಂಗದ ಸೊಬಗು ರಾಮನಲ್ಲಿ ಮೇಳೈಸಿತ್ತು ಎಂಬುದು ಶಬರಿಯ ಮಾತಿನಿಂದ ವ್ಯಕ್ತವಾಗುತ್ತದೆ.

5. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ “ಶಬರಿ” ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ರಾಮನು ಶಬರಿಯನ್ನು ಕುರಿತು ಲಕ್ಷ್ಮಣನಿಗೆ ಹೇಳುವನು.
ಸಂದರ್ಭ: ರಾಮನ ದರ್ಶನಕ್ಕಾಗಿ ಕಾಯುತ್ತಿದ್ದ ಶಬರಿಯು ಅವನಿಂದ ಮೋಕ್ಷವನ್ನು ಪಡೆದು ಧನ್ಯಳಾದಳು. ಅವಳನ್ನು ಕುರಿತು ಲಕ್ಷ್ಮಣನು ಅವಳದು ಮಗುವಿನ ರೀತಿಯ ಪ್ರೀತಿ. ನಿನ್ನನ್ನು ನೋಡಿ ನಲಿಯುತ್ತ ಕೊನೆಗೆ ನಮ್ಮನ್ನೇ ಮರೆತಳು ಎಂದು ರಾಮನಿಗೆ ಹೇಳಿದಾಗ ಬೆಳಕಿನ ನಿರೀಕ್ಷೆ ಇರುವವರಿಗೆ ಬತ್ತಿ ತಾನು ಉರಿದು ಕಪ್ಪಾಗಿ ಲೋಕಕ್ಕೆ ಬೆಳಕು ನೀಡುವುದು ಅರ್ಥವಾಗುವುದಿಲ್ಲ. ಆದರೆ ಬೆಳಕು ನೀಡುವವರು ಶಬರಿಯ ರೀತಿ ಇರುವರು ಎಂದು ಹೇಳುವನು.
ಸ್ವಾರಸ್ಯ: ಶಬರಿಯ ಜೀವನವು ಉರಿವ ದೀಪದ ಹಾಗೆ, ಬೇರೆಯವರಿಗೆ ಉಪಕಾರ ಮಾಡುವುದರಲ್ಲಿಯೇ ತೃಪ್ತವಾಗುವುದು. ಆದರೆ ಸಾಮಾನ್ಯರು ಮಹಾತ್ಮರ ತ್ಯಾಗವನ್ನು ಗಮನಿಸಲಾರರು. ತಮಗೆ ದೊರೆತದ್ದನ್ನು ಪಡೆದುಕೊಳ್ಳುವರಷ್ಟೇ, ದೀಪದ ಬೆಳಕನ್ನು ಪಡೆದುಕೊಳ್ಳುವವರು ಬತ್ತಿಯ ತ್ಯಾಗವನ್ನು ಅರಿಯಲಾರರು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

V. ಹೊಂದಿಸಿ ಬರೆಯಿರಿ:
ಅ. ಆ.
1. ಮತಂಗ ಸೀತೆ
2. ಪು.ತಿ.ನ ಆಶ್ರಮ
3. ದಶರಥ ಮೇಲುಕೋಟೆ
4. ಚಿತ್ರಕೂಟ ಪರ್ವತ
5. ಭೂಮಿಜಾತೆ ರಾಮ
ಅರಣ್ಯ
ಉತ್ತರ:
1. ಮತಂಗ ಆಶ್ರಮ 
2. ಪು.ತಿ.ನ ಮೇಲುಕೋಟೆ
3. ದಶರಥ ರಾಮ
4. ಚಿತ್ರಕೂಟ ಪರ್ವತ
5. ಭೂಮಿಜಾತೆ ಸೀತೆ

ಭಾಷಾ ಚಟುವಟಿಕೆ :
1. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಸ್ಫೋಟಿಸು, ಎಚ್ಚರ, ಕಣ್ಣಿಗೆ, ಅದ್ಭುತ, ಡಾಕ್ಟರ್, ಬಟ್ಟೆ.
ಉತ್ತರ: ಕಾರ್ಯ, ಶಸ್ತ್ರ, ಸ್ಫೋಟಿಸು, ಅದ್ಭುತ, ಡಾಕ್ಟರ್ (ರ್ಯ, ಸ್ತ್ರ, ಸ್ಫೋ, ದ್ಭು, ಕ್ಟ)
2. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಸಮನಾಗಿ, ದೇಶ, ಮನೆಯ, ರೋದನ, ಬಳಿಕ, ನೆಲ, ಮದುವೆ, ಮಾನುಷ, ಹೊತ್ತು, ಒಳಗೆ.
ಸಮನಾಗಿ:ಸ  ದೇಶ:ಶ  ಮನೆಯ:ಯ ರೋದನ:ರೋ ಬಳಿಕ:ಳಿ ನೆಲ:ಲ ಮದುವೆ:ವೆ      ಮಾನುಷ: ಷ ಹೊತ್ತು: ಹೊ ಒಳಗೆ:ಳ
3. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ, ಝ : ___________(ಮಹಾಪ್ರಾಣಾಕ್ಷರಗಳು)
ಆ) ವರ್ಗೀಯ ವ್ಯಂಜನಾಕ್ಷರಗಳು : 25 : : ಅವರ್ಗೀಯ ವ್ಯಂಜನಾಕ್ಷರಗಳು : __________(9)
ಇ) ಆ,ಈ,ಊ : ದೀರ್ಘಸ್ವರಗಳು : : ಅ,ಇ,ಉ,ಋ : __________(ಹ್ರಸ್ವಸ್ವರಗಳು)
ಈ) ಸ್ವರಗಳು : 13 : : ಯೋಗವಾಹಗಳು : ____________(2)

*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon