ಗದ್ಯ-4 ಭಾಗ್ಯಶಿಲ್ಪಿಗಳು ನೋಟ್ಸ್ | ನಾಲ್ವಡಿ ಕೃಷ್ಣರಾಜ ಒಡೆಯರು | Gadya 4 Bhagyashilpigalu Notes | 10th First Language Kannada Notes

ಗದ್ಯಪಾಠ – 4 ಭಾಗ್ಯಶಿಲ್ಪಿಗಳು 1. ನಾಲ್ವಡಿ ಕೃಷ್ಣರಾಜ ಒಡೆಯರು, (ಸಮಿತಿ ರಚನೆ)
2. ಸರ್ ಎಂ. ವಿಶ್ವೇಶ್ವರಯ್ಯ  -ಡಿ.ಎಸ್.ಜಯಪ್ಪಗೌಡ



ಕೃತಿಕಾರರ ಪರಿಚಯ:
ಡಿ.ಎಸ್.ಜಯಪ್ಪಗೌಡ ಅವರ ಕಾಲ 1947. ಇವರು ಚಿಕ್ಕಮಗಳೂರು ಜಿಲ್ಲೆಯ ದಾರದ ಹಳ್ಳಿಯವರು. ಇವರು ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಇವರು ಭಾಜನರಾಗಿದ್ದಾರೆ. ಪ್ರಸ್ತುತ ಗದ್ಯಭಾಗದ ಸರ್.ಎಂ.ವಿಶ್ವೇಶ್ವರಯ್ಯ ಲೇಖನವನ್ನು ಡಿ.ಎಸ್.ಜಯಪ್ಪಗೌಡರ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು  ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ.ಶ.1895ರಲ್ಲಿ ತಮ್ಮ 10ನೇ ವಯಸ್ಸಿನಲ್ಲಿ ಪಟ್ಟಾಭಿಷಿಕ್ತರಾದರು.
2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಂಕಣಬದ್ಧರಾದರು.
3. ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
ಉ: 1900ರಲ್ಲಿ ಶಿವಸಮುದ್ರದ ಕಾವೇರಿ ನದಿಯ ಬಳಿ ಸ್ಥಾಪಿಸಿದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ.
4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?
ಉ: ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ “ಸರ್” ಪದವಿಯನ್ನು ನೀಡಿ ಗೌರವಿಸಿತು.
5. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?
ಉ: ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ “ಎಂಜಿನಿಯರ್ಸ್ ದಿನಾಚರಣೆ” ಯನ್ನು ಆಚರಿಸಲಾಗುತ್ತಿದೆ.

II. ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ನಗರಪಾಲಿಕೆಗಳು ಹಾಗೂ ಗ್ರಾಮಪಂಚಾಯತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದವು. ಇವರ ಕಾಲದಲ್ಲಿ 1. ಗ್ರಾಮ ನಿರ್ಮಲೀಕರಣ 2.ವೈದ್ಯಸಹಾಯ 3.ವಿದ್ಯಾಪ್ರಚಾರ 4. ನೀರಿನ ಸೌಕರ್ಯ 5.ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು. ಇದು ಭಾರತ ಮಾತ್ರವಲ್ಲ, ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಉತ್ಪಾದನಾ ಯೋಜನೆ. 1907ರಲ್ಲಿ ವಾಣಿವಿಲಾಸ ಸಾಗರ (ಮಾರಿಕಣಿವೆ) ಕಟ್ಟಲ್ಪಟ್ಟಿತು. 1911ರಲ್ಲಿ ಕೃಷ್ಣರಾಜ ಸಾಗರ ಇವರ ಬೃಹತ್ ಮುಂಗಾಣ್ಕೆಯ ಕೊಡುಗೆ.
3. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
ಉ: ವಿಶ್ವೇಶ್ವರಯ್ಯನವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂದರಿತಿದ್ದ ಅವರು ಶಿಕ್ಷಣದ ಹಲವು ಯೋಜನೆಗಳನ್ನು ರೂಪಿಸಿದರು. “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು” ಎಂಬುದನ್ನು ಮನಗಂಡಿದ್ದರು.
4. ನೆಹರೂ ಅವರು ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಏನೆಂದು ಹೇಳಿದ್ದಾರೆ?
ಉ: “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ.” ಎಂದು ಪಂಡಿತ್ ಜವಾಹರಲಾಲ್ ನೆಹರುರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರ ಕುರಿತು ಹೇಳಿದರು.
5. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ಉ: ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದ ವಿಶ್ವೇಶ್ವರಯ್ಯನವರು 1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪಿಸಿದರು. ಉಳಿತಾಯ ಬ್ಯಾಂಕುಗಳು, ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳ ರಚನೆ ಮಾಡಿದರು. ಸಾರ್ವಜನಿಕ ಜೀವ ವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕ್ ಗಳನ್ನು ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವಗಳನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು.

III. ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು “ಮಾದರಿ ಮೈಸೂರು ರಾಜ್ಯ” ಹೇಗಾಯಿತು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಇವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯು ನೂತನ ರೂಪವನ್ನು ಪಡೆದು ನಿಜವಾದ ಜನಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. 1923ರಲ್ಲಿ ಇವರು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಡಿಸಿ ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಿದರು. 1907ರಲ್ಲಿ ಇವರು ನ್ಯಾಯ ವಿಧಾಯಕ ಸಭೆಯನ್ನು ಸ್ಥಾಪಿಸಿದರು. ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇವರ ಆಡಳಿತಾವಧಿಯಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ ಶಿವನಸಮುದ್ರದ ಕಾವೇರಿ ನದಿಯ ಬಳಿ ಪ್ರಾರಂಭವಾಯಿತು. ನಾಡಿನ ಮೊದಲ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದಿದ್ದರು. ಹಲವಾರು ಸಾಮಾಜಿಕ ಸುಧಾರಣೆಗಳ ಮೂಲಕ ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾಗಿದ್ದ ಇವರು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದರು.

2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ?
ಉ: ನಾಲ್ವಡಿ ಕೃಷ್ಣರಾಜ ಒಡೆಯರಿಂದ ದಿವಾನರಾಗಿ ನೇಮಕವಾದ ವಿಶ್ವೇಶ್ವರಯ್ಯನವರು ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಛೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು. ರಾಜ್ಯ ಪ್ರವಾಸ ಮಾಡಿ ಅಜಮಾಯಿಸಿ ಕಾರ್ಯ ನಡೆಸಿದರು. ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ತ್ಯ ನೀಡಿದರು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು. ಮೈಸೂರು ಮಾದರಿ ಎಂಬ ಹೊಸ ಆಡಳಿತ ಜನ್ಮ ತಾಳಲು ಕಾರಣರಾದರು. ಇವರ ಆಡಳಿತಾವಧಿಯಲ್ಲಿ ಮೈಸೂರು ರಾಜಧಾನಿಯಾಗಿ ಮತ್ತು ರಾಜ್ಯದ ಎರಡನೆಯ ದೊಡ್ಡ ನಗರವಾಗಿ ಪ್ರಸಿದ್ಧಿ ಪಡೆಯಿತು. ಮೈಸೂರಿನ ಹೊಸ ಅರಮನೆ, ಸಿ.ರಂಗಾಚಾರ್ಲು ಪುರಭವನ, ಅರಮನೆ ವಿಸ್ತರಣೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಲಲಿತಮಹಲ್ ಅರಮನೆಯ ತಳಹದಿ ಮತ್ತು ಪ್ರಧಾನ ಅರಮನೆಯ ಕಛೇರಿ ಸಮುಚ್ಚಯಗಳು ಇವರ ಕಾಲದಲ್ಲಿಯೇ ನಿರ್ಮಾಣಗೊಂಡವು. ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರು. ಜನಾರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಆಸ್ಪತ್ರೆಗಳನ್ನು ಪ್ರಾರಂಭಿಸಿದರು. ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹೀಗೆ ವಿಶ್ವೇಶ್ವರಯ್ಯನವರು ಹೊಸ ಯುಗದ ಹರಿಕಾರರಾಗಿ ಮೈಸೂರು ಸಂಸ್ಥಾನಕ್ಕೆ ನವಚೈತನ್ಯವನ್ನು ತುಂಬಿದರು.

3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯನವರು ಸಲ್ಲಿಸಿದ ಕೊಡುಗೆಗಳನ್ನು ತಿಳಿಸಿ?
ಉ: ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂಬುದನ್ನರಿತ್ತಿದ್ದ ಅವರು ಶಿಕ್ಷಣದ ಯೋಜನೆಗಳನ್ನು ರೂಪಿಸಿದರು. 1913ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದ ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ಬೇರ್ಪಡಿಸಿ ಸಂಸ್ಥಾನವೇ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಫಲಶೃತಿ. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಹಿಳೆಯರಿಗಾಗಿ ಗೃಹಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು. ವಿದ್ಯಾರ್ಥಿ ವೇತನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು. ಗ್ರಂಥಾಲಯಗಳ ವ್ಯವಸ್ಥೆಗೆ ಅಸ್ಥಿಭಾರ ಹಾಕಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ:
1. “ಸಾಮಾಜಿಕ ಕಾನೂನುಗಳ ಹರಿಕಾರ.”
ಉ: ಈ ಮೇಲಿನ ವಾಕ್ಯವನ್ನು ಭಾಗ್ಯಶಿಲ್ಪಿಗಳು ಗದ್ಯಭಾಗದ ಪಠ್ಯಪುಸ್ತಕ ಸಮಿತಿ ರಚನೆಯ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಂಸ್ಥಾನವು ಮಾದರಿ ಮೈಸೂರು ಎಂದು ಹೆಸರಾಗಿತ್ತು. ಇವರು ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಇವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾಗಿದ್ದರು ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ಹಲವಾರು ಕ್ರಮಗಳನ್ನು ಕೈಗೊಂಡಿದ್ದರಿಂದ ಸಾಮಾಜಿಕ ಸುಧಾರಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರಿಂದ ಅವರು ಮೇಲಿನಂತೆ ಹೆಸರಾಗಿದ್ದರು.

2. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು”
ಉ: ಈ ಮೇಲಿನ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡ ಬರೆದ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಯಿಂದ ಆರಿಸಲಾದ ಭಾಗ್ಯಶಿಲ್ಪಿಗಳು ಗದ್ಯಭಾಗದ ಸರ್ ಎಂ.ವಿಶ್ವೇಶ್ವರಯ್ಯ ಎನ್ನುವ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ:  ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಸಿಂದ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದರು ಎನ್ನುವಾಗ ಲೇಖಕರು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ವಿಶ್ವೇಶ್ವರಯ್ಯನವರು ವೈಜ್ಞಾನಿಕ ವಿಮರ್ಶಾ ಶಕ್ತಿಯನ್ನು ಹೊಂದಿದ್ದರು. ದೂರದರ್ಶಿತ್ವ ಶಕ್ತಿ ಅವರಲ್ಲಿತ್ತು. ಸದಾ ಹೊಸತನ್ನು ಅನ್ವೇಷಿಸುವ ಮೂಲಕ ಸಮಾಜಕ್ಕೆ ಒಳಿತು ಮಾಡುವ ಮನೋಭಾವ ಅವರದಾಗಿತ್ತು. ಅವರ ಸಾಧನೆಗಳು ಅವರ ವ್ಯಕ್ತಿತ್ವಕ್ಕೆ ಒಂದು ಕಿರೀಟದ ಹಾಗೆ ಎನ್ನುವುದನ್ನು ಮೇಲಿನ ವಾಕ್ಯ ಸ್ಪಷ್ಟಪಡಿಸುವುದು.

3. ಮೈಸೂರು ಸಂಸ್ಥಾನಕ್ಕೆ ಮಾದರಿ ಮೈಸೂರು ಎಂಬ ಕೀರ್ತಿ ಪ್ರಾಪ್ತವಾಯಿತು.
ಉ: ಈ ಮೇಲಿನ ವಾಕ್ಯವನ್ನು ಭಾಗ್ಯಶಿಲ್ಪಿಗಳು ಗದ್ಯಭಾಗದ ಪಠ್ಯಪುಸ್ತಕ ಸಮಿತಿ ರಚನೆಯ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: 1902 ರ ಆಗಸ್ಟ್ 8ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರು ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡಿದ್ದರಿಂದ ಮೈಸೂರು ಸಂಸ್ಥಾನಕ್ಕೆ “ಮಾದರಿ ಮೈಸೂರು” ಎಂಬ ಕೀರ್ತಿ ಪ್ರಾಪ್ತವಾಯಿತು ಎಂದು ವಿವರಿಸುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಮೈಸೂರಿನ ಸರ್ವತೋಮುಖ ಅಭಿವೃದ್ಧಿ ಮಾಡಿದರು. ಅವರು ಮಾಡಿದ ಸಾಮಾಜಿಕ ಕೆಲಸಗಳು, ಅಭಿವೃದ್ಧಿ ಕಾರ್ಯಗಳು ಮೈಸೂರು ಸಂಸ್ಥಾನಕ್ಕೆ ಮಾದರಿ ಮೈಸೂರು ಎಂಬ ಕೀರ್ತಿ ಪ್ರಾಪ್ತವಾಗುವಂತೆ ಮಾಡಿತು ಎಂಬುದನ್ನು ಮೇಲಿನ ವಾಕ್ಯವು ಸೂಚಿಸುವುದು.

4. “ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ.”
ಉ: ಈ ಮೇಲಿನ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡ ಬರೆದ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಯಿಂದ ಆರಿಸಲಾದ ಭಾಗ್ಯಶಿಲ್ಪಿಗಳು ಗದ್ಯಭಾಗದ ಸರ್ ಎಂ.ವಿಶ್ವೇಶ್ವರಯ್ಯ ಎನ್ನುವ ಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ರವರು ಸರ್ ಎಂ.ವಿಶ್ವೇಶ್ವರಯ್ಯನವರ ಕುರಿತು ಹೇಳಿದ್ದಾರೆ.
ಸಂದರ್ಭ: ಜವಾಹರಲಾಲ್ ನೆಹರೂರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರ ಕುರಿತು ಹೇಳುತ್ತ ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ಆದರೆ ವಿಶ್ವೇಶ್ವರಯ್ಯನವರು ಈ ಮಾತಿಗೆ ಹೊರತಾದವರು ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ವಿಶ್ವೇಶ್ವರಯ್ಯನವರು ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವವನ್ನು ನೀಡಿದ್ದರು. ಅವರು ಮಿತಭಾಷಿಗಳಾಗಿದ್ದರು ಮತ್ತು ಸದಾ ಕರ್ಮಯೋಗಿಯಾಗಿದ್ದರು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

V. ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿರಿ:
1. ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು.__________
ಉ: ಅವರ ತಾಯಿ ಮಹಾರಾಣಿ ವಾಣಿವಿಲಾಸರವರು.
2. 1914ರಲ್ಲಿ ಶಾಲಾ ಪ್ರವೇಶಕ್ಕೆ ______________ನಿಷೇಧವಾಯಿತು.
ಉ: ಜಾತಿಪರಿಗಣನೆಯ ನಿಷೇಧ
3. ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದಲ್ಲಿ ____________ಆಗಿ ಸೇವೆ ಪ್ರಾರಂಭಿಸಿದರು.
ಉ: ಸಹಯಕ ಎಂಜಿನಿಯರ್
4. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ___________ಅವರು ವಿಶ್ವೇಶ್ವರಯ್ಯನವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಉ: ಲಾರ್ಡ್ ಸಂಡ್ ಹರ್ಸ್ಟ್
5. ಭಾರತ ಸರ್ಕಾರವು ವಿಶ್ವೇಶ್ವರಯ್ಯನವರಿಗೆ _____________ಎಂಬ ಪ್ರಶಸ್ತಿ ನೀಡಿ ಗೌರವಿಸಿತು.
ಉ: ಭಾರತರತ್ನ
ಭಾಷಾ ಚಟುವಟಿಕೆ: 
1. ತತ್ಸಮ ತದ್ಭವ ಬರೆಯಿರಿ 
ವಂಶ-ಬಂಚ, 
ಸ್ಥಾನ-ತಾಣ, 
ಯಶ-ಜಸ, 
ಪಟ್ಟಣ-ಪತ್ತನ, 
ಕಾರ್ಯ-ಕಜ್ಜ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon