ಗದ್ಯ - 2 ಲಂಡನ್ ನಗರ ನೋಟ್ಸ್ | Gadya 2 London Nagara | 10th Kannada Question Ans | 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು |

ಗದ್ಯಪಾಠ-2- ಲಂಡನ್ ನಗರ -ವಿ.ಕೃ.ಗೋಕಾಕ



ಕೃತಿಕಾರರ ಪರಿಚಯ:
ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ.ವಿನಾಯಕ ಕೃಷ್ಣ ಗೋಕಾಕರ ಕಾಲ ಕ್ರಿ.ಶ.1906. ಇವರು ಹಾವೇರಿ ಜಿಲ್ಲೆಯ ಸವಣೂರಿನವರು. ಇವರು ಸಮುದ್ರ ಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧು ರಶ್ಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ದ್ಯಾವಾ ಪೃಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಮೊದಲಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಲಂಡನ್ ನಗರ ಗದ್ಯಭಾಗವನ್ನು ವಿ.ಕೃ.ಗೋಕಾಕರ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
ಉ: ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ವೂಲವರ್ಥ.
2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು?
ಉ: ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಲ್ಗಾರ್ ಸ್ಕ್ವೇರ್.
3. ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ?
ಉ: ವೆಸ್ಟ್ ಮಿನಿಸ್ಟರ್ ಅಬೆ ಸಂತ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ.
4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು?
ಉ: “ಚೇರಿಂಗ್ ಕ್ರಾಸ್” ಎನ್ನುವುದು ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ.

II. ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ:
1. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳು ಯಾವುವು?
ಉ: “ವೂಲವರ್ಥ” ಎಂಬ ಸ್ಟೇಷನರಿ ಅಂಗಡಿಯಲ್ಲಿ ಎಲ್ಲ ತರದ ಸಾಮಾನುಗಳನ್ನು ಒಂದು ಪೆನ್ನಿಯಿಂದ ಆರು ಪೆನ್ನಿಯವರೆಗೆ ಮಾರುತ್ತಾರೆ. ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾಕೋಶವಾಗಿದೆ. ಬೂಟು, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಅಡಿಗೆಯ ಪಾತ್ರೆ, ಇಲೆಕ್ಟ್ರಿಕ್ ದೀಪದ ಸಾಮಾನು, ಫೋಟೋ, ಅಡವಿಯ ಹೂವು, ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ದೊರೆಯುತ್ತವೆ.
2. ಲಂಡನ್ನಿನ ಹೆಣ್ಣುಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ?
ಉ: ಲಂಡನ್ನಿನಲ್ಲಿ ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಕೆಲಸ ಮಾಡುತ್ತಾರೆ. ಉಪಗೃಹಗಳಲ್ಲಿ ಅಮ್ಮಣ್ಣಿಗಳಿರುತ್ತಾರೆ (ಸ್ತ್ರೀಯರು). ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ಟ್ ಕಾರಕೂನ, ಒಬ್ಬ ಹೆಣ್ಣು ಮಗಳು, ಸಿನಿಮಾ ಗೃಹದಲ್ಲಿ ಬಂದವರಿಗೆ ಜಾಗ ಹುಡುಕಿಕೊಡುವವರೂ ಹೆಣ್ಣು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನು ಇಟ್ಟಿದ್ದಾರೆ.
3. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಉ: ಲಂಡನ್ನಿನ ಹೆಣ್ಣುಮಕ್ಕಳ ಟೊಪ್ಪಿಗೆಯನ್ನು ಲೇಖಕರು ಕುತೂಹಲದಿಂದ ನೋಡಿದರು. ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿಗೆಯಲ್ಲವೆ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ ಎಂದು ಲೇಖಕರು ಟೊಪ್ಪಿಗೆಯ ವಿಶೇಷತೆಯ ಕುರಿತು ಹೇಳಿದ್ದಾರೆ.
4. ಪೊಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ?
ಉ: ಲೇಖಕರು ಪೊಯೆಟ್ ಕಾರ್ನರ್ ಕವಿಗಳ ಮೂಲೆಗೆ ಹೋಗಿದ್ದರು. ಅಲ್ಲಿ ಕಿಪ್ಲಿಂಗ್ ಕವಿಯ ಮೇಲೆ ಹಾಕಿದ್ದ ಕಲ್ಲು ಅವರ ಕಣ್ಣಿಗೆ ಬಿತ್ತು. ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಡ್ರಾಯ್ಡನ್ ಎಲ್ಲರಿಗೂ ಒಂದೊಂದು ಹಿಡಿ ಮಣ್ಣನ್ನು ಕೊಡುವಂತೆ ಒಂದೊಂದು ಕಲ್ಲನ್ನು ಕೊಟ್ಟಿದ್ದರು. ಒಂದು ಸಣ್ಣಕಲ್ಲಿನ ಮೇಲೆ ಓ ಅಪರೂಪದ ಬೆನ್ ಜಾನ್ಸನ್ ಎಂದೂ ಸಹ ಇತ್ತು. ಅದೊಂದು ಪ್ರಖ್ಯಾತ ನಾಟಕಕಾರನಿಗೆ ಮೀಸಲಿಟ್ಟ ಕಲ್ಲಾಗಿತ್ತು. ಯಾರ ಕಣ್ಣಿಗೂ ಸಹಜವಾಗಿ ಬೀಳದೆ ವರ್ಡ್ಸ್ ವರ್ತನೂ ತಪಶ್ಚರ್ಯಕ್ಕೆ ಕುಳಿತಂತಹ ಶಿಲಾಮೂರ್ತಿಯೂ ಅಲ್ಲಿತ್ತು.

5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?
ಉ: ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ ಮಿನಿಸ್ಟರ್ ಮಂದಿರದಲ್ಲಿಯೆ ಒಂದು ಭಾಗದಲ್ಲಿದೆ. 3ನೇ ಎಡ್ವರ್ಡ್ ನು ಸ್ಕಾಟಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ. ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ. ಅದರಲ್ಲಿ ಯಾವ ಸಿದ್ಧಿಯಿದೆಯೋ, ಯಾವ ಮಂತ್ರವಿದೆಯೋ. ಇಂಗ್ಲೇಂಡಿನ ಅತುಲ ವೈಭವವನ್ನು ನೋಡಿದರೆ ಇಂಥದೊಂದು ವಿಶೇಷವೇನಾದರೂ ಅದರಲ್ಲಿ ಇರಬಹುದು ಎನಿಸುತ್ತದೆ.

III. ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ವಿಚಾರಿಸಿರುವ ವಿಶೇಷತೆಗಳೇನು?
ಉ: ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು. ಅಲ್ಲಿನ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗಲು ಸಾಧ್ಯವಿಲ್ಲದ ಕಾರಣ ಅದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ. ವೂಲವರ್ಥ ಎಂಬ ಸ್ಟೇಷನರಿ ಅಂಗಡಿಯು ನೋಡುವ ಹಾಗಿದೆ. ಈ ಅಂಗಡಿಯ ವಿಧವಿಧದ ವಿಭಾಗಗಳನ್ನು ನಿರ್ಮಿಸಿದ ಬುದ್ಧಿಯ ಚಮತ್ಕಾರವು ನೋಡತಕ್ಕಂತಹುದು. ಪ್ರಾಚೀನ ಮಹಾಕಾವ್ಯದಂತೆ ಮಹಾಕೋಶವಾದ ಇಲ್ಲಿ ಸಣ್ಣ ಸಣ್ಣ ವಸ್ತುಗಳಿಂದ ಹಿಡಿದು ಯುದ್ಧ ಸಾಮಾಗ್ರಿಯವರೆಗೆ ಎಲ್ಲವೂ ದೊರೆಯುತ್ತವೆ.
ಲಂಡನ್ ನಗರದಲ್ಲಿ ಗಂಡಿಗಿಂತ ಹೆಣ್ಣು ಹೆಚ್ಚಿದ್ದ ಹಾಗೆ ಕಾಣುತ್ತದೆ. ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಕೆಲಸ ಮಾಡುತ್ತಾರೆ. ಇಲ್ಲಿಯ ಇಂಡಿಯಾ ಆಫೀಸು ನೋಡುವ ಹಾಗಿದೆ. ವಾಚನಾಲಯದಲ್ಲಿ ಅನೇಕ ಮಹತ್ವದ ಪುಸ್ತಕಗಳಿದ್ದು ಕರ್ನಾಟಕದ ವಿಷಯವಾಗಿ ಎಷ್ಟೋ ಹೊಸ ಮಾತುಗಳು ಇಲ್ಲಿ ಗೊತ್ತಾಗಬಹುದು ಎಂದು ಕಾಣುತ್ತದೆ. ಚೇರಿಂಗ್ ಕ್ರಾಸ್ ಎಂಬ ಓಣಿಯಲ್ಲಿ ಆಂಗ್ಲ ಸಾಮ್ರಾಜ್ಯದ ವೈಭವವು ಕಂಡುಬರುವುದು. ಇಂಡಿಯಾ ಆಫೀಸಿನ ಹತ್ತಿರ ಆಫ್ರಿಕನ್ ಕಛೇರಿ, ಇನ್ನೊಂದು ವಸಾಹತಿನ ಕಛೇರಿ, ನೂರೆಂಟು ಬ್ಯಾಂಕ್ ಗಳು ದೊಡ್ಡ ಕಂಪನಿಗಳ ಕಛೇರಿಗಳು, ಎಲ್ಲವೂ ದಂಗು ಬಡಿಸುವಂತೆ ನೆರೆದಿವೆ. ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ. ಬೀದಿ ಬೀದಿಗೆ ಮೂಲೆ ಮೂಲೆಗೆ ಇತಿಹಾಸ ಪ್ರಸಿದ್ಧ ಮಹಾಪುರುಷರ ಸ್ಮಾರಕಗಳಿವೆ. ಅಲ್ಲಿಯ ಹೆಣ್ಣು ಮಕ್ಕಳ ಟೊಪ್ಪಿಗೆಗಳು ಒಂದು ಇದ್ದಂತೆ ಇನ್ನೊಂದಿರುವುದಿಲ್ಲ. ಲಂಡನ್ ನಗರದಲ್ಲಿ ವೆಸ್ಟ್ ಮಿನಿಸ್ಟರ್ ಅಬೆ ಎಂಬ ಪುರಾತನವಾದ ಪ್ರಾರ್ಥನಾ ಮಂದಿರವಿದೆ. ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು. ಪೊಯೆಟ್ಸ್ ಕಾರ್ನರ್, ವಿಜ್ಞಾನಿಗಳ ಮೂಲೆ, ಅರಸರ ಅರಮನೆ, ರಾಜವಿಭಾಗ ಪಟ್ಟಾಭಿಷೇಕವಾಗುವಾಗ ರಾಜರು ಕೂರುತ್ತಿದ್ದ ಸ್ಕೋನ್ ಆಫ್ ಸ್ಕೋನ್ ಎಂಬ ಶಿಲೆಯನ್ನು ಒಳಗೊಂಡ ಶಿಲಾ ಶಾಸನ ಇವೆಲ್ಲವೂ ಇಲ್ಲಿನ ವಿಶೇಷಗಳಾಗಿವೆ ಎಂದು ಲೇಖಕರು ವಿವರಿಸಿದ್ದಾರೆ.

2. ವೆಸ್ಟ್ ಮಿನಿಸ್ಟರ್ ಅಬೆ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ?
ಉ: ವೆಸ್ಟ್ ಮಿನಿಸ್ಟರ್ ಅಬೆ ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ. ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇಲ್ಲಿ ಸಂತ, ಸಾರ್ವಭೌಮರು ಮಲಗಿರುವರು. ಕವಿಪುಂಗವರು ಒರಗಿರುವರು. ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು. “Mortality behold and fear, what a litt’r of tombs is hear” (ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳು ಇಲ್ಲಿವೆ ನೋಡಿ ಅಂಜು) ಎಂದು 300 ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿಯು ಹಾಡಿದನು. ಗೋಲ್ಡ್ ಸ್ಮಿತ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು Visit to West Minister Abbey ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ. ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ. ಹೊರಗಿನಿಂದ ಉತ್ತಮವಾಗಿ ಸಿಂಗರಿಸಿದ ಸಣ್ಣ ಬಾಗಿಲು ಒಳಗೆ ಮಾತ್ರ ಕಟ್ಟಡವು ಸುಂದರವಾಗಿದೆ. ಸಾಗುವ ಹಾದಿಯ ಎಡಬಲಕ್ಕೆ ರಾಜಕಾರಣ ಚತುರರ ಶಿಲಾಮೂರ್ತಿಗಳಿವೆ. ಪಾದ್ರಿಯ ಆಸನದ ಉತ್ತಮವಾದ ಕೆತ್ತನೆಯ ಕೆಲಸದಿಂದ ಕೂಡಿದ್ದ ಬಂಗಾರದ ಬಣ್ಣವನ್ನು ಅದಕ್ಕೆ ಕೊಟ್ಟಿದ್ದರು.

IV. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ:
1. “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ”
ಉ: ಈ ಮೇಲಿನ ವಾಕ್ಯವನ್ನು ವಿ.ಕೃ.ಗೋಕಾಕರು ಬರೆದಿರುವ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆರಿಸಲಾದ “ಲಂಡನ್ ನಗರ” ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಲೇಖಕರು ಲಂಡನ್ ನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದಾಗ ತಮಗಾದ ಅನುಭವವನು ಕುರಿತು ಹೇಳುವಾಗ ಈ ಮಾತು ಬಂದಿದೆ. ಲಂಡನ್ನಿನ ಬೀದಿ ಬೀದಿಯ ಮೂಲೆಮೂಲೆಗೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ” ಎಂದು ಹೇಳುತ್ತಿರುವಂತೆ ತೋರುತ್ತದೆ ಎಂದು ಹೇಳಿದ್ದಾರೆ.
ಸ್ವಾರಸ್ಯ: ಲಂಡನ್ನಿನ ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಇತಿಹಾಸದ ಅಡಿಗಲ್ಲುಗಳು ದೊರೆಯುವುದನ್ನು ತಮ್ಮ ದೇಶದ ಸಾಧಕರ, ಮಹನೀಯರು ಬಗ್ಗೆ ಅಲ್ಲಿನ ಜನತೆ ಹೊಂದಿರುವ ಅಭಿಮಾನವನ್ನು, ಲಂಡನ್ನಿನ ಜನರ ಇತಿಹಾಸ ಪ್ರಜ್ಞೆ ಮತ್ತು ದೇಶಪ್ರೇಮವನ್ನು ಮೇಲಿನ ವಾಕ್ಯದ ಮೂಲಕ ಅರಿಯಬಹುದು.

2. “ಹೊತ್ತು! ಹೊತ್ತು! ಹೊತ್ತೇ ಹಣ.”
ಉ: ಈ ಮೇಲಿನ ವಾಕ್ಯವನ್ನು ವಿ.ಕೃ.ಗೋಕಾಕರು ಬರೆದಿರುವ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆರಿಸಲಾದ “ಲಂಡನ್ ನಗರ” ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಲೇಖಕರು ಲಂಡನ್ನಿನ ಬೀದಿಗಳಲ್ಲಿ ಲಕ್ಷಾನುಲಕ್ಷ ಜನರು ತಿರುಗಾಡುವುದನ್ನು ಅವಸರದಿಂದ ಓಡಾಡುವುದನ್ನು ನೋಡಿ Time! Time! Time is Money ಎಂದು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ವಿಲಾಯತಿಯಲ್ಲಿ ಜನರು ಸಮಯಕ್ಕೆ ಕೊಡುವ ಮಹತ್ವವನ್ನು ಮತ್ತು ಅವರ ಅವಸರದ ಬದುಕನ್ನು ಮೇಲಿನ ವಾಕ್ಯವು ಸ್ಪಷ್ಟಪಡಿಸುತ್ತದೆ.

3. “ಯಾರನ್ನು ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ! ಮಣ್ಣು! ಮಣ್ಣು!”
ಉ: ಈ ಮೇಲಿನ ವಾಕ್ಯವನ್ನು ವಿ.ಕೃ.ಗೋಕಾಕರು ಬರೆದಿರುವ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆರಿಸಲಾದ “ಲಂಡನ್ ನಗರ” ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಲೇಖಕರು ವೆಸ್ಟ್ ಮಿನಿಸ್ಟರ್ ಅಬೆಯಲ್ಲಿರುವ Poets Corner (ಪೊಯೆಟ್ಸ್ ಕಾರ್ನರ್) ಗೆ ಹೋಗಿದ್ದರು. ಅಲ್ಲಿ ಸತ್ತವರಿಗೆ ನಾವು ಒಂದೊಂದು ಹಿಡಿ ಮಣ್ಣನ್ನು ಕೊಡುವಂತೆ ಒಂದೊಂದು ಕಲ್ಲನ್ನು ಕೊಟ್ಟಿದ್ದರು. ಲೇಖಕರಿಗೆ ಆ ಕವಿಗಳ ಮೂಲೆಯಲ್ಲಿ ನಡೆದಾಗ ಒಂದು ಭವ್ಯತೆಯು ಬಂದು ಕಣ್ಣೆದುರು ನಿಲ್ಲುತ್ತದೆ. ಹೃದಯ ಕಂಪಿಸುತ್ತದೆ. ತಪ್ಪು ಹೆಜ್ಜೆ ಹಾಕಬಹುದೆಂಬ ಹೆದರಿಕೆ ಹಿಡಿದು ನಿಲ್ಲಿಸುತ್ತದೆ ಎಂದು ಲೇಖಕರು ವಿವರಿಸುವಾಗ ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ಜೀವನದ ನಶ್ವರತೆಯನ್ನು, ಎಲ್ಲರೂ ಒಂದು ದಿನ ಮಣ್ಣು ಸೇರಲೇಬೇಕಾದ ಅನಿವಾರ್ಯತೆಯನ್ನು ಮೇಲಿನ ವಾಕ್ಯವು ಸ್ಪಷ್ಟ ಪಡಿಸುತ್ತದೆ.

4. “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ.”
ಉ: ಈ ಮೇಲಿನ ವಾಕ್ಯವನ್ನು ವಿ.ಕೃ.ಗೋಕಾಕರು ಬರೆದಿರುವ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆರಿಸಲಾದ “ಲಂಡನ್ ನಗರ” ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಲಂಡನ್ ನಗರಕ್ಕೆ ಪ್ರವಾಸ ಹೋಗಿದ್ದ ಲೇಖಕರು ಅಷ್ಟೇ ಸ್ವಲ್ಪ ದಿನಗಳಲ್ಲಿ ತನ್ನ ಮನಸ್ಸು ವಿಕಾಸ ಹೊಂದಿತೆಂದೂ, ವಿಶಾಲ ದೃಷ್ಟಿ ಹೊಂದಿದೆನೆಂದೂ ಹೇಳಿದ್ದಾರೆ. ತನ್ನ ಸಂಸ್ಕೃತಿಯು ಎಂತಹ ಒರೆಗಲ್ಲಿನ ಮೇಲೆ ನಿಂತಿದೆ. ಇದನ್ನೆಲ್ಲ ನೆನೆಸಿದಾಗ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ಎಂದು ಬೇಕನ್ನನು ಹೇಳಿದ ಮಾತು ನೆನಪಾಗುತ್ತದೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಜೀವನದ ವಿಕಾಸದಲ್ಲಿ ಪ್ರವಾಸದ ಮಹತ್ವವನ್ನು, ಪ್ರವಾಸವು ನಮ್ಮ ಅನುಭವವನ್ನು ಹೆಚ್ಚಿಸುವುದು ಎಂಬುದನ್ನು ಮೇಲಿನ ವಾಕ್ಯವು ಸ್ಪಷ್ಟ ಪಡಿಸುತ್ತದೆ.

V. ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ:
1. ಲಂಡನ್ ಪಟ್ಟಣವೆಂದರೆ ಒಂದು __________ಜಗತ್ತು. (ಸ್ವತಂತ್ರ)
2. ವೂಲವರ್ಥ ಎಂಬುದು ___________ಅಂಗಡಿ. (ಸ್ಟೇಷನರಿ)
3. ಮನೆ ಹಿಡಿದು ಇರುವ ___________ಬುದ್ಧಿ ಮನೆಯ ಮಟ್ಟದ್ದೇ. (ತರುಣನ)
4. ಅಬೆಯಲ್ಲಿರುವ ಸಿಂಹಾಸನಕ್ಕೆ ____________ಎಂದು ಹೆಸರು. (ಸ್ಟೋನ್ ಆಫ್ ಸ್ಟೋನ್)
5. ವೆಸ್ಟ್ ಮಿನಿಸ್ಟರ್ ಅಬೆ ಎಂಬುದು ___________ (ಪ್ರಾರ್ಥನಾ ಮಂದಿರ)

VI. ಪದಗಳನ್ನು ಬಿಡಿಸಿ ಸಂಧಿಯ ಹೆಸರು ಬರೆಯಿರಿ:
ಒಮ್ಮೊಮ್ಮೆ, ಜಾಗವನ್ನು, ಅತ್ಯಾದರ, ವಾಚನಾಲಯ, ಸಂಗ್ರಹಾಲಯ, ಓಣಿಯಲ್ಲಿ.
ಒಮ್ಮೆ + ಒಮ್ಮೆ = ಲೋಪಸಂಧಿ
ಜಾಗ + ಅನ್ನು = ಆಗಮಸಂಧಿ
ಸಂಗ್ರಹ + ಆಲಯ = ಸವರ್ಣದೀರ್ಘಸಂಧಿ
ಅತಿ + ಆದರ = ಯಣ್ ಸಂಧಿ
ವಾಚನ + ಆಲಯ = ಸವರ್ಣದೀರ್ಘಸಂಧಿ
ಓಣಿ + ಅಲ್ಲಿ = ಆಗಮಸಂಧಿ

ಭಾಷಾ ಚಟುವಟಿಕೆ:
1. ಕನ್ನಡ ಸಂಧಿಗಳು : ಲೋಪ, ಆಗಮ, ಆದೇಶ.
ಉದಾ: ಲೋಪಸಂಧಿಗೆ- ನಮ್ಮೆಡೆಗೆ = ನಮ್ಮ +ಎಡೆಗೆ, ಬನದೊಳಕ್ಕೆ = ಬನದ + ಒಳಕ್ಕೆ
ಆಗಮಸಂಧಿ – ಕೈಯಲ್ಲಿ = ಕೈ + ಅಲ್ಲಿ, ರಕ್ಷೆಯಿಡಲಿ = ರಕ್ಷೆ + ಇಡಲಿ
ಆದೇಶಸಂಧಿಗೆ – ಕಣ್ + ಪನಿ = ಕಂಬನಿ, ತೇಜ + ಕೆಡೆ = ತೇಜಗೆಡೆ.
2. ಸಂಸ್ಕೃತ ಸಂಧಿಗಳು:
ಸಂಸ್ಕೃತ ಸ್ವರ ಸಂಧಿಗಳು : ಸವರ್ಣದೀರ್ಘಸಂಧಿ, ಗುಣಸಂಧಿ, ಯಣ್ ಸಂಧಿ, ವೃದ್ಧಿಸಂಧಿ.
ಸಂಸ್ಕೃತ ವ್ಯಂಜನ ಸಂಧಿಗಳು: ಜಶ್ತ್ವಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ.
3. ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ:
ಸುರ + ಅಸುರ = ಸುರಾಸುರ = ಸವರ್ಣದೀರ್ಘಸಂಧಿ
ಬಲ್ಲೆನು + ಎಂದು = ಬಲ್ಲೆನೆಂದು = ಲೋಪಸಂಧಿ
ಸೂರ್ಯ + ಉದಯ = ಸೂರ್ಯೋದಯ = ಗುಣಸಂಧಿ
ಮಳೆ + ಕಾಲ = ಮಳೆಗಾಲ = ಆದೇಶ ಸಂಧಿ
ಅಷ್ಟ + ಐಶ್ವರ್ಯ = ಅಷ್ಟೈಶ್ವರ್ಯ = ವೃದ್ಧಿಸಂಧಿ
ವೇದಿ + ಅಲ್ಲಿ = ವೇದಿಯಲ್ಲಿ = ಆಗಮಸಂಧಿ

4. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ?
1. ನಮೋನಮೋ : ದ್ವಿರುಕ್ತಿ : : ಧೀರಶೂರ : ಜೋಡುನುಡಿ
2. ಲೋಪಸಂಧಿ : ಸ್ವರಸಂಧಿ : : ಆದೇಶಸಂಧಿ : ವ್ಯಂಜನಸಂಧಿ
3. ಕಟ್ಟಕಡೆಗೆ : ಕಡೆಗೆಕಡೆಗೆ : : ಮೊತ್ತಮೊದಲು : ಮೊದಲು ಮೊದಲು
4. ಶರಚ್ಚಂದ್ರ : ಶ್ಚುತ್ವಸಂಧಿ : : ದಿಗಂತ : ಜಶ್ತ್ವಸಂಧಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon