ಗದ್ಯ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? | ಕೇಶವ ಬಲಿರಾಮ ಹೆಡಗೇವಾರ | Gady 5 Nijavada Adarsha Purusha Yaragabeku | Keshava Baliram Hedagevar

ಗದ್ಯಪಾಠ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? -ಕೇಶವ ಬಲಿರಾಮ ಹೆಡಗೇವಾರ


ಕೃತಿಕಾರರ ಪರಿಚಯ: 
ಕೇಶವ ಬಲಿರಾಮ ಹೆಡಗೇವಾರರು ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರು. ಇವರು 1889ರಲ್ಲಿ ಏಪ್ರಿಲ್ 1 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಇವರು ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಹಾಗೂ ವಿನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು. ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದು ಸರಿಸುಮಾರು 60 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಪಾಠವನ್ನು ಅವರ ಪ್ರೇರಣಾ ಎನ್ನುವ ಕೃತಿಯಿಂದ ಆರಿಸಲಾಗಿದೆ.

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು?
ಉ: ತತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು.
2. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು?
ಉ: ನಮ್ಮಿಂದ ಎಂದೂ ದೂರವಾಗದಂತಹ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶವಾಗಬಲ್ಲನು.
3. ಗುರು ಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ?
ಉ:  ಗುರು ಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನೇ ಗುರುವೆಂದು ಭಾವಿಸಿ ಪೂಜಿಸುತ್ತಾರೆ.
4. ತಿಲಕರನ್ನು ಯಾವ ರೀತಿ ಚಿತ್ರಿಸಲಾಗಿತ್ತು?
ಉ: ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳನ್ನು ಕೊಟ್ಟು ಚಿತ್ರಿಸಲಾಗಿತ್ತು.
5. ಶಿವಚರಿತ್ರೆಯಲ್ಲಿ ಯಾವ ಉಲ್ಲೇಖ ಮಾಡಲಾಗಿದೆ?
ಉ: ಶಿವಾಜಿ ಮಹಾರಾಜರು ಶ್ರೀಶಂಕರರ ಅವತಾರವೆಂಬ ಉಲ್ಲೇಖವನ್ನು ಶಿವಚರಿತ್ರೆಯಲ್ಲಿ ಮಾಡಲಾಗಿದೆ.

II. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಜನರು ಮೂರ್ತಿ ಪೂಜೆ ಮಾಡಲು ಕಾರಣವೇನು?
ಉ: ತತ್ವವೇ ನಮ್ಮ ಆದರ್ಶವಾಗಿದ್ದರೂ ಸಹ ಅದರ ಪ್ರತಿಪಾದನೆ ಮಾಡಿದಷ್ಟು ಸುಲಭವಾಗಿ ಆಚರಣೆಯಲ್ಲಿ ತರುವುದು ಕಠಿಣ. ಸಮಾಜದಲ್ಲಿ ಮೂರ್ತಿ ಪೂಜೆ ರೂಢಿಯಲ್ಲಿ ಬರುವುದಕ್ಕೂ ಇದೇ ಕಾರಣ. ವಾಸ್ತವವಾಗಿ ಕಲ್ಲಿನಲ್ಲಿ ಭಗವಂತ ಇದ್ದಾನೆಯೇ? ಅದೃಶ್ಯ, ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ವಿಧಾನ.

2. ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು?
ಉ: ನಮ್ಮಿಂದ ಎಂದೂ ದೂರವಾಗದಂತಹ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದು, ಸರ್ವಥಾ ಪ್ರಮಾದಾತೀತನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬಲ್ಲನು. ಆದರ್ಶವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದಷ್ಟೇ ಅಲ್ಲದೇ ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿರಬೇಕು. ಯಾರ ಜೀವನ ಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ, ಅಕಲಂಕವಾಗಿದೆಯೋ, ನಿರ್ಭಿಡೆಯಿಂದ ಸೂರ್ಯ ಪ್ರಕಾಶಕ್ಕೆ ಮುಖ ಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು.

3. ಮೊಗ್ಗನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?
ಉ: ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಮುಂದೆ ಅವು ಪೂರ್ಣ ವಿಕಸಿತವಾಗಲಾರವು. ಯಾವ ಪುಷ್ಪವು ಪೂರ್ತಿ ಅರಳಿದೆಯೋ, ನಿಸ್ಸಂದೇಹವಾಗಿಯೂ ಶುದ್ಧವಾಗಿ ಕ್ರಿಮಿರಹಿತವಾಗಿದೆಯೋ ಮತ್ತು ಯಾವುದರ ಒಳಹೊರಗನ್ನು ಚೆನ್ನಾಗಿ ಕಾಣಬಹುದೋ ಆ ಪುಷ್ಪವನ್ನೇ ಆದರ್ಶವೆಂದು ಸ್ವೀಕರಿಸುವುದರಿಂದ ನಮ್ಮ ಕಾರಕುಸುಮದಲ್ಲಿಯೂ ನವಚೈತನ್ಯದ ಸೊಬಗು ತುಂಬಿಬಂದೀತು.

4. ಧ್ವಜವನ್ನೇ ನಮ್ಮ ಗುರುವೆಂದು ಸ್ವೀಕರಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೇಕೆ?
ಉ: ಲೇಖಕರು ಧ್ವಜವನ್ನೇ ಗುರುವೆಂದು ಭಾವಿಸಿ ಗುರು ಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತಾರೆ. ಅವರು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಏಕೆಂದರೆ ಯಾರೇ ಆಗಲಿ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿ ಇದ್ದಾರು ಎಂಬ ಭರವಸೆಯಾದರೂ ಏನು? ಕೇವಲ ತತ್ವ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು ಅದನ್ನು ಧ್ವಜವು ಸಾಂಕೇತಿಸುವುದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು, ನಮ್ಮ ಕಣ್ಣಿಗೆ ಕಟ್ಟುತ್ತವೆಯೋ, ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಫೂರ್ತಿಯು ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ಲೇಖಕರು ತಮ್ಮ ಗುರುವಾಗಿ ಭಾವಿಸಿದ್ದೇವೆಂದು ಹೇಳಿದ್ದಾರೆ.

5. ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?
ಉ: ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿ ಹೋಗುವುದು ಸ್ವಾಭಾವಿಕ. ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ.

III. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಆದರ್ಶ ವ್ಯಕ್ತಿ ದೋಷರಹಿತನಾಗಿರಬೇಕಾದ್ದು ಮುಖ್ಯ, ಏಕೆ?
ಉ: ನಮ್ಮಿಂದ ಎಂದೂ ದೂರವಾಗದಂತಹ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದು, ಸರ್ವಥಾ ಪ್ರಮಾದಾತೀತನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬಲ್ಲನು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿ ಹೋಗುವುದು ಸ್ವಾಭಾವಿಕ. ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದಷ್ಟೇ ಅಲ್ಲದೇ ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿರಬೇಕು. ಯಾರ ಜೀವನ ಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಅಕಲಂಕವಾಗಿದೆಯೋ ನಿರ್ಭಿಡೆಯಿಂದ ಸೂರ್ಯ ಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು.

2. ಶ್ರೀಕೃಷ್ಣನನ್ನು ಕೇವಲ ಪುಣ್ಯ ಸಂಚಯಕ್ಕಾಗಿ ಪೂಜಿಸುವುದು ಸರಿಯಲ್ಲ –ಲೇಖಕರು ಹೀಗೆ ಹೇಳಲು ಕಾರಣವೇನು?
ಉ: ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ; ಅವನಾದರೋ ದೇವರು, ಪೂರ್ಣಾವತಾರನಾಗಿದ್ದ. ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೇ? –ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ, ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ, ಕೇವಲ ಪುಣ್ಯ ಸಂಚಯಕ್ಕಾಗಿ! ಎಂಥ ಸಂಕುಚಿತ ಯೋಚನೆ ಇದು ಎಂದು ಲೇಖಕರು ಹೇಳಿದ್ದಾರೆ.

3. ಯಾವ ಕಲೆಯನ್ನು ನಾವು ಸೊಗಸಾಗಿ ಸಾಧಿಸಿದ್ದೇವೆಂದು ಲೇಖಕರು ನಗೆಯಾಡುತ್ತಾರೆ?
ಉ: ಶ್ರೀರಾಮ ಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ, ಕೇವಲ ಪುಣ್ಯ ಸಂಚಯಕ್ಕಾಗಿ ಎಂಬ ಭಾವನೆ ಸಮಾಜದಲ್ಲಿದೆ. ನಮ್ಮ ಸಮಾಜದ ಅದಃಪತನಕ್ಕೆ ಕಾರಣವಾದ ಅಂಶಗಳಲ್ಲಿ ಇದೂ ಒಂದು ವಾಸ್ತವಿಕವಾಗಿ ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ ಅತ್ಯಂತ ಮಹತ್ವಪೂರ್ಣವಾಗಿದೆ. ವೀರರಸಪ್ರಧಾನವಾಗಿದೆ. ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾನೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಚಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮ ತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೈವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡೆವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ.  ಶಿವಾಜಿ ಮಹಾರಾಜರನ್ನು ಶಂಕರರ ಅವತಾರವೆಂದು ಹೇಳಲಾಗುತ್ತದೆ. ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ವಿಚಿತ್ರ. ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ! ಅಲ್ಲಿ ಅವರ ಪೂಜೆಯೇನೋ ಭಾವ ಭಕ್ತಿಗಳಿಂದ ನಡೆಯುತ್ತದೆ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿ ಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ ಎಂದು ಲೇಖಕರು ಹೇಳಿದ್ದಾರೆ.

4. ಪುಣ್ಯ ಸಂಚಯ ಹಾಗೂ ಮೋಕ್ಷ ಪ್ರಾಪ್ತಿಗಾಗಿ ಗ್ರಂಥಪಠಣ ಮಾಡುವುದರ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉ: ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ; ಅವನಾದರೋ ದೇವರು, ಪೂರ್ಣಾವತಾರನಾಗಿದ್ದ. ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೇ?  -ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ, ಕೇವಲ ಪುಣ್ಯ ಸಂಚಯಕ್ಕಾಗಿ! ಎಂಥ ಸಂಕುಚಿತ ಯೋಚನೆ ಇದು!
ಇದಕ್ಕೆ ಉದಾಹರಣೆಯನ್ನು ಹೇಳುತ್ತ ಲೇಖಕರು ಅವರಲ್ಲಿಗೆ ಒಬ್ಬರು ಮಹನೀಯರು ಬಂದ ಪ್ರಸಂಗವನ್ನು ನೆನೆದಿದ್ದಾರೆ. ಅವರು ದಿನನಿತ್ಯ ಸ್ನಾನ, ಸಂಧ್ಯಾವಂದನೆಗಳಾದ ನಂತರ ಆಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತದ್ದರು. ಒಂದು ದಿನ ಲೇಖಕರು ಊಟದ ಸಮಯದಲ್ಲಿ, “ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕಲ್ಲವೇ” ಎಂದು ಕೇಳಿದಾಗ ಅವರು ಕೆರಳಿ ಕೆಂಡವಾಗಿ  “ನೀವು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೇ? ನಾನು ಗುಣಗ್ರಹಣಕ್ಕಾಗಿ ಅಲ್ಲ, ಆದರೆ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ” ಎಂದರು. ನಮ್ಮ ಸಮಾಜದ ಅದಃಪತನಕ್ಕೆ ಕಾರಣವಾದ ಅಂಶಗಳಲ್ಲಿ ಇದೂ ಒಂದೆಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.

5. ತಿಲಕರು ಹಾಗೂ ಶಿವಾಜಿಯವರನ್ನು ಜನ ಹೇಗೆ ಸ್ವೀಕರಿಸಿದ್ದಾರೆ? ಈ ಬಗ್ಗೆ ಲೇಖಕರು ಯಾವ ಅಭಿಪ್ರಾಯ ತಳೆದಿದ್ದಾರೆ?
ಉ: ವಾಸ್ತವಿಕವಾಗಿ ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ ಅತ್ಯಂತ ಮಹತ್ವಪೂರ್ಣವಾಗಿದೆ. ವೀರರಸ ಪ್ರಧಾನವಾಗಿದೆ. ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾನೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಚಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮ ತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೈವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡೆವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ. ಶಿವಾಜಿ ಮಹಾರಾಜರನ್ನು ಶಂಕರರ ಅವತಾರ ಎಂದು ಹೇಳಲಾಗುತ್ತಿದೆ. “ಶಿವಚರಿತ್ರೆ” (ಶಿವಾಜಿಯ ಚರಿತ್ರೆ) ಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ! ಬಿಡಿ, ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿ ಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳನ್ನು ಕೊಡಲಾಗಿತ್ತು. ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ! ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ. ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ ಎಂದು ಲೇಖಕರು ವಿವರಿಸಿದ್ದಾರೆ.

IV. ಕೆಳಗಿನ ವಾಕ್ಯಗಳ ಅರ್ಥ ಸ್ವಾರಸ್ಯವನ್ನು ಆರೇಳು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ:
1. ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೇ?
ಉ: ಈ ಮೇಲಿನ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರವರು ಬರೆದ ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿ ಬಿಟ್ಟಿವೆ. ಶ್ರೀಕೃಷ್ಣನಂತಹ ಪೂರ್ಣಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ, ಶ್ರೀಕೃಷ್ಣರನ್ನು ಪೂಜಿಸುವುದು, ಮಹಾಭಾರತ, ರಾಮಾಯಣ, ಗೀತೆಯಂತಹ ಶ್ರೇಷ್ಠ ಗ್ರಂಥ ಪಠಿಸುವುದು ಕೇವಲ ಪುಣ್ಯ ಸಂಚಯಕ್ಕಾಗಿ ಎಂಬ ಭಾವನೆ ಹಲವರಲ್ಲಿದೆ. ಲೇಖಕರಿಗೆ ಪರಿಚಿತರಾದ ಮಹನೀಯರೊಬ್ಬರು ಪ್ರತಿದಿನ ಆಧ್ಯಾತ್ಮ ರಾಮಾಯಣದ ಅಧ್ಯಾಯ ಓದುತ್ತಿದ್ದುದನ್ನು ನೋಡಿದ ಲೇಖಕರು ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತಂದಿರಬೇಕಲ್ಲವೇ ಎಂದು ಕೇಳಿದಾಗ ಅವರು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ನಾನು ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತಿರುವೆನೆ ಹೊರತೂ ಗುಣಗ್ರಹಣಕ್ಕಾಗಿ ಅಲ್ಲ ಎಂದು ಹೇಳುತ್ತ ಮೇಲಿನಂತೆ ಹೇಳಿದರು.
ಸ್ವಾರಸ್ಯ: ಭಗವಂತನ ಪೂಜೆ ನಡೆಯುವುದೇ ಹೊರತೂ ಅವನ ಗುಣಗಳನ್ನು ಅನುಸರಿಸಬೇಕೆನ್ನುವ ಭಾವವು ಸಮಾಜದಲ್ಲಿ ಮೂಡಿಲ್ಲ ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

2. ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು.
ಉ: ಈ ಮೇಲಿನ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರವರು ಬರೆದ ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಮುಂದೆ ಅವು ಪೂರ್ಣ ವಿಕಸಿತವಾಗಲಾರವು. ಯಾವ ಪುಷ್ಪವು ಪೂರ್ಣವಾಗಿ ಅರಳಿದೆಯೋ, ನಿಸ್ಸಂದೇಹವಾಗಿಯೂ ಶುದ್ಧವಾಗಿ ಕ್ರಿಮಿರಹಿತವಾಗಿದೆಯೋ ಮತ್ತು ಯಾವುದರ ಒಳಹೊರಗನ್ನು ಚೆನ್ನಾಗಿ ಕಾಣಬಹುದೋ ಅಂಥ ಪುಷ್ಪವನ್ನೇ ಆದರ್ಶವಾಗಿ ಸ್ವೀಕರಿಸುವುದರಿಂದ ನಮ್ಮ ಕಾರಕುಸುಮದಲ್ಲಿಯೂ ನವಚೈತನ್ಯದ ಸೊಬಗು ತುಂಬಿ ಬಂದೀತು. ಯಾರ ಜೀವನ ಕುಸುಮವು ಪೂರ್ತಿಯಾಗಿ ಅರಳಿದೆಯೋ ಅಕಲಂಕವಾಗಿದೆಯೋ ನಿರ್ಭಿಡೆಯಿಂದ ಸೂರ್ಯಪ್ರಕಾಶಕ್ಕೆ ಮುಖ ಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ನಿರ್ದೋಷ ವ್ಯಕ್ತಿಯನ್ನು ಆದರ್ಶವಾಗಿ ಸ್ವೀಕರಿಸಬೇಕು ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon