ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | SSLC Kannada Question Ans |

ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | SSLC Kannada Notes |
-ದ.ರಾ.ಬೇಂದ್ರೆ
ಕೃತಿಕಾರರ ಪರಿಚಯ:
ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕ್ರಿ.ಶ. 1896ರಲ್ಲಿ ಧಾರವಾಡ ಜಿಲ್ಲೆಯ ಸಾಧನಕೇರಿಯಲ್ಲಿ ಜನಿಸಿದರು. ಗರಿ, ಗಂಗಾವತರಣ, ನಾದಲೀಲೆ, ಮೇಘದೂತ, ಸಖೀಗೀತ, ಸೂರ್ಯಪಾನ, ನಗೆಯ ಹೊಗೆ, ಸಾಹಿತ್ಯವಿರಾಟ್ ಸ್ವರೂಪ ಮೊದಲಾದವು ಇವರು ಬರೆದ ಪ್ರಮುಖ ಕೃತಿಗಳು. ಇವರ ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯಭಾಗವನ್ನು ಇವರ ಗರಿ ಕವನ ಸಂಕಲನದಿಂದ ಆರಿಸಲಾಗಿದೆ.

Video Lesson

I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಉ: ಹಕ್ಕಿಯು ಕಣ್ಣುರೆಪ್ಪೆ ಮುಚ್ಚಿ ತೆರೆಯುವ ವೇಗದಲ್ಲಿ ಹಾರುತ್ತಿದೆ.
2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಉ: ಹಕ್ಕಿಯ ಗರಿಯಲ್ಲಿ ಬಿಳಿ ಹೊಳೆ ಬಣ್ಣಗಳಿವೆ.
3. ಹಕ್ಕಿಯ ಕಣ್ಣುಗಳು ಯಾವುವು?
ಉ: ಹಕ್ಕಿಯ ಕಣ್ಣುಗಳು ಸೂರ್ಯಚಂದ್ರರು.
4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಉ: ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
5. ಹಕ್ಕಿ ಯಾರನ್ನು ಹರಸಿದೆ?
ಉ: ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
6. ಹಕ್ಕಿಯು ಯವುದರ ಸಂಕೇತವಾಗಿದೆ?
ಉ: ಹಕ್ಕಿಯು ಕಾಲದ ಸಂಕೇತವಾಗಿದೆ.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ಉ: ಕಾಲದ ಹಕ್ಕಿಯ ಬಣ್ಣ ನೀಲ ಮೇಘ ಸದೃಶ. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಧ, ವ್ಯಾಪಕ-ವಿಶಾಲ ಎಷ್ಟೆಂದರೆ ಆಕಾಶಕ್ಕೆ ರೆಕ್ಕೆಗಳು ಮೂಡಿ ಆಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ಹಾರಾಟ ಅಂಥದು. ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ, ಮಾಸ, ವರ್ಷ, ಯುಗ, ಮನ್ವಂತರ, ಕಲ್ಪಗಳೆಂಬ ನಕ್ಷತ್ರಗಲ ಮಾಲೆ ಧರಿಸಿ ದಿನ ರಾತ್ರಿಗಳೆಂಬ ಸೂರ್ಯ ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

2. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಉ: ಯುಗಯುಗಗಳ ಆಗುಹೋಗುಗಳನ್ನೆಲ್ಲ ತಿಕ್ಕಿ ತೀಡಿ, ಚರಿತ್ರೆಯನ್ನು ಹಿಂದೆ ಬಿಟ್ಟು, ಮನ್ವಂತರಗಳ ಭಾಗ್ಯಕ್ಕೆ ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ ಚೇತನಗೊಳಿಸಿ ಹೊಸಗಾಲದ ಹಸುಮಕ್ಕಳನ್ನು ಹರಸಿ ಕಾಲದ ಹಕ್ಕಿಯು ಹಾರುವುದು. ಹೊಸಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಒರಸುವುದು ಈ ಕಾಲಪಕ್ಷಿ, ಹೊಸಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವುದು ಈ ಕಾಲಪಕ್ಷಿ.

3. ಹಕ್ಕಿಯು ಯಾವ ಮೇರೆ ಮೀರಿ ನೀರನು ಹೀರಿದೆ?
ಉ: ಹಕ್ಕಿಯು ಶುಕ್ರಗ್ರಹದ ಎಲ್ಲೆಯನ್ನು ಮೀರಿ ಹಾರಿದೆ. ಚಂದ್ರನೂರಿನಲ್ಲಿ ನೀರನ್ನು ಹೀರಿದೆ. ಮಂಗಳ ಲೋಕದ ಅಂಗಳಕ್ಕೇರಿದೆ. ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು! ಎಂದು ಕವಿ ಹೇಳಿದ್ದಾರೆ.

III. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳು ಯಾವುವು?
ಉ: ಚಲನಶೀಲತೆ ಜೀವಂತಿಕೆಯ ಗುಣ. ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ.  ಎಂತಹ ಪ್ರಭಾವಶಾಲಿಯಾದರೂ ನಿಸರ್ಗದತ್ತವಾದ ಕಾಲಚಕ್ರದ ಎದುರಿನಲ್ಲಿ ತಲೆಬಾಗಲೇಬೇಕು. ಅದಕ್ಕೆ ಹೊಂದಿಕೊಳ್ಳಬೇಕು. ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತ ಹೋಗುತ್ತದೆ.
ವಿಶ್ವವ್ಯಾಪಿ ಕಾಲವು ಕೇವಲ ಗತಿಶೀಲವಲ್ಲ, ಪ್ರಗತಿಶೀಲ ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುಮಾರು ದೂರ ಗಮಿಸಬಲ್ಲುದು. ಭೂತಕಾಲ, ವರ್ತಮಾನಕಾಲ, ಭವಿಷ್ಯತ್ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು. ಎಲ್ಲ ಜನಾಂಗಗಳನ್ನೂ ಈ ಕಾಲಪಕ್ಷಿ ಹೊತ್ತು ಮುನ್ನಡೆದಿದೆ. ಆಕಾಶ ಅನಂತವಾದದ್ದು. ಹಾಗೆಯೇ ಕಾಲಪಕ್ಷಿಯೂ ಅನಂತವಾದದ್ದು. ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ ಮೊದಲಾದ ವಿಶ್ವಗಳನ್ನು ಸಿಕ್ಕಿಸಿಕೊಂಡಿದೆ. ಸೂರ್ಯಚಂದ್ರರು ಕಾಲಪಕ್ಷಿಯ ಕಣ್ಣುಗಳು. ಸಣ್ಣ ಪುಟ್ಟ ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವ ಕಾಲಪಕ್ಷಿಯು ಅವುಗಳನ್ನು ನಾಶ ಮಾಡುವ ಕಾರ್ಯವನ್ನು ಮಾಡುವುದು. ಕಾಲ ಪಕ್ಷಿಯ ಮುಂದೆ ಯಾವ ಸಾರ್ವಭೌಮರ ಆಟವೂ ನಡೆಯಲಾರದು. ಎಲ್ಲರೂ ಕಾಲ ಪಕ್ಷಿಗೆ ತಲೆಬಾಗಲೇ ಬೇಕು. ಕಾಲಪಕ್ಷಿಯು ಹೊಸಯುಗಕ್ಕೊಮ್ಮೆ ಅದರ ಹಣೆಬರಹವನ್ನು ಬರೆಯುವ ಮತ್ತು ಹಳೆಯ ಯುಗದ ಹಣೆಬರಹ ಒರೆಸುವ ಕಾರ್ಯವನ್ನು ಮಾಡುವುದು. ಯುಗಯುಗಗಳನ್ನು ಮನ್ವಂತರಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿದೆ. ಹೊಸಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವುದು ಈ ಕಾಲಪಕ್ಷಿ ಎಂದು ಬೇಂದ್ರೆಯವರು ಕಾಲಪಕ್ಷಿಯನ್ನು ವರ್ಣಿಸಿದ್ದಾರೆ.

IV. ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. “ರೆಕ್ಕೆಗಳೆರಡೂ ಪಕ್ಕದುಲುಂಟು”
ಉ: ಈ ಮೇಲಿನ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ “ಗರಿ” ಕವನಸಂಕಲನದಿಂದ ಆರಿಸಲಾದ “ಹಕ್ಕಿ ಹಾರುತಿದೆ ನೋಡಿದಿರಾ?” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ಈ ಕವನವನ್ನು ಬರೆದಿದ್ದಾರೆ. ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯ ಪಕ್ಷಿ. ಈ ಕಾಲವೆನ್ನುವ ಪಕ್ಷಿಯು ಕರಿನೆರೆ ಬಣ್ಣದ ಪುಚ್ಚಗಳನ್ನು ಹೊಂದಿದೆ, ಬಿಳಿ ಹೊಳೆ ಬಣ್ಣದ ಗರಿಗಳನ್ನು ಹೊಂದಿದೆ. ಕೆಂಪಾದ ಹೊನ್ನಿನ ಬಣ್ಣಬಣ್ಣಗಳ ರಕ್ಕೆಗಳೆರಡನ್ನೂ ಪಕ್ಕದಲ್ಲಿ ಹೊಂದಿದೆ ಎಂದು ಕವಿ ವರ್ಣಿಸಿದ್ದಾರೆ.
ಸ್ವಾರಸ್ಯ: ಹಕ್ಕಿಯ ಪುಚ್ಚ ಕರಿಯ ಬಣ್ಣದ್ದು ಎನ್ನುವಲ್ಲಿ ಅದು ಭೂತಕಾಲವನ್ನೂ (ಕಳೆದುಹೋದ ಕಾಲ), ಹೊಳೆಯುತ್ತಿರುವ ಗರಿಯ ಬಿಳಿಯ ಬಣ್ಣವು ವರ್ತಮಾನ ಕಾಲವನ್ನೂ, ನಮ್ಮ ಮುಂದಿರುವ ಕಾಲ ಭವಿಷ್ಯತ್ ಕಾಲ  ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಬಂಗಾರ ಬಣ್ಣದ್ದಾಗಿರುತ್ತದೆ ಎಂದು ಕವಿಯು ಕಾಲ ಪಕ್ಷಿಯ ಚಲನೆಯ ಅಂಶಗಳನ್ನು ಇಲ್ಲಿ ವಿವರಿಸಿದ್ದಾರೆ.

2. “ಸಾರ್ವಭೌಮರಾ ನೆತ್ತಿಯ ಕುಕ್ಕಿ”
ಉ: ಈ ಮೇಲಿನ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ “ಗರಿ” ಕವನಸಂಕಲನದಿಂದ ಆರಿಸಲಾದ “ಹಕ್ಕಿ ಹಾರುತಿದೆ ನೋಡಿದಿರಾ?” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಸಾಮ್ರಾಜ್ಯದ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ, ಚಿಕ್ಕಪುಟ್ಟ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ, ಖಂಡಖಂಡಗಳನ್ನೇ ತೇಲಿಸಿ-ಮುಳುಗಿಸಿ, ಸಾರ್ವಭೌಮರೆಲ್ಲರ ನೆತ್ತಿಯ ಕುಕ್ಕುವ ಕಾಲದ ಹಕ್ಕಿಯು ಹಾರುತಿದೆ ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಧರಣಿ ಮಂಡಲದಲ್ಲಿರುವ ಏಳು ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಈ ಖಂಡಗಳಿಗೆ ತಾವೇ ಸಾರ್ವಭೌಮರೆಂದು ಬೀಗುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಕಾಲಪಕ್ಷಿ ಮೆಟ್ಟಿ ನಿಲ್ಲುವುದು. ಕಾಲಪಕ್ಷಿಯ ಮುಂದೆ ಯಾರ ಆಟವೂ ನಡೆಯದು ಎನ್ನುವುದು ವಾಕ್ಯದ ಸ್ವಾರಸ್ಯವಾಗಿದೆ.

3. “ಬಲ್ಲರು ಯಾರಾ ಹಾಕಿದ ಹೊಂಚ”
ಉ: ಈ ಮೇಲಿನ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ “ಗರಿ” ಕವನಸಂಕಲನದಿಂದ ಆರಿಸಲಾದ “ಹಕ್ಕಿ ಹಾರುತಿದೆ ನೋಡಿದಿರಾ?” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ  ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೇ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವುದು ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೇ? ಇದು ಅಸಾಧ್ಯ ಎನ್ನುವ ಹೊಳಹನ್ನು “ಬಲ್ಲರು ಯಾರ ಹಾಕಿದ ಹೊಂಚ” ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆಯವರು ಇಲ್ಲಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

4. “ಹೊಸಗಾಲದ ಹಸುಮಕ್ಕಳ ಹರಸಿ”
ಉ: ಈ ಮೇಲಿನ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ “ಗರಿ” ಕವನಸಂಕಲನದಿಂದ ಆರಿಸಲಾದ “ಹಕ್ಕಿ ಹಾರುತಿದೆ ನೋಡಿದಿರಾ?” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಕಾಲವೆನ್ನುವ ಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ ಮನ್ವಂತರಗಳಿಗೆ ಚೈತನ್ಯ ನೀಡುವುದು ಅಂದರೆ ಸಜೀವಗೊಳಿಸುವುದು. ನಮ್ಮ ಭೂಮಂಡಲದಲ್ಲಿ ನಡೆದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ. ಹೊಸಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವುದು ಈ ಕಾಲಪಕ್ಷಿಯೇ ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಬದಲಾದ ಲೋಕಕ್ಕೆ ಕಣ್ಣು ತೆರೆದ ಅಂದಂದಿನ ಜನರನ್ನು, -ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣು ತೆರೆದಿರುವವರನ್ನು ಮುನ್ನಡೆಸುವುದು ಕಾಲಪಕ್ಷಿಯ ಕಾರ್ಯ ಎಂಬುದು ಈ ವಾಕ್ಯದ ಸ್ವಾರಸ್ಯವಾಗಿದೆ.

5. “ಮಂಗಳ ಲೋಕದ ಅಂಗಳಕೇರಿ”
ಉ: ಈ ಮೇಲಿನ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ “ಗರಿ” ಕವನಸಂಕಲನದಿಂದ ಆರಿಸಲಾದ “ಹಕ್ಕಿ ಹಾರುತಿದೆ ನೋಡಿದಿರಾ?” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು! ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ, ವೈಜ್ಞಾನಿಕ ಕ್ಷೇತ್ರದಲ್ಲಿ ಆಗಬಹುದಾದ ಭಾರೀ ಬದಲಾವಣೆಗಳ ಕುರಿತಾದ ಕವಿಯ ದೂರದರ್ಶಿತ್ವ ಈ ನುಡಿಯಲ್ಲಿ ವ್ಯಕ್ತವಾಗಿದೆ.

V. ಹೊಂದಿಸಿ ಬರೆಯಿರಿ:
(ಅ) (ಬ)
1. ಹಕ್ಕಿ ಜ್ಞಾನಪೀಠ ಪ್ರಶಸ್ತಿ
2. ನಾಕುತಂತಿ ಪಕ್ಷಿ
3. ನೀಲಮೇಘಮಂಡಲ ಖಂಡಖಂಡಗಳ
4. ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
5. ತೇಲಿಸಿ ಮುಳುಗಿಸಿ ಸಮಬಣ್ಣ
6. ಮಂಗಳ ಭಾಗ್ಯವ ತೆರೆಸಿ
ಅಂಗಳಕೇರಿ
ಉತ್ತರ
1. ಹಕ್ಕಿ - ಪಕ್ಷಿ
2. ನಾಕುತಂತಿ - ಜ್ಞಾನಪೀಠಪ್ರಶಸ್ತಿ
3. ನೀಲಮೇಘಮಂಡಲ - ಸಮಬಣ್ಣ
4. ರಾಜ್ಯದ ಸಾಮ್ರಾಜ್ಯದ - ತೆನೆಒಕ್ಕಿ
5. ತೇಲಿಸಿ ಮುಳುಗಿಸಿ - ಖಂಡಖಂಡಗಳ
6. ಮಂಗಳ – ಅಂಗಳಕೇರಿ

ಭಾಷಾ ಚಟುವಟಿಕೆ:
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ಸಮಾನಾರ್ಥಕ ಪದ ಬರೆಯಿರಿ?
ಸೂರ್ಯ – ಭಾಸ್ಕರ, ರವಿ, ಭಾನು, ಭಾನು, ನೇಸರ
ಎದೆ – ಹೃದಯ
ಮೇಘ – ಮೋಡ
ಗಡ – ಚಿಕ್ಕಕೋಟೆ
ಹರಸು – ಆಶೀರ್ವದಿಸು
ಕೆನ್ನ – ಕೆಂಪು
ಒಕ್ಕಿ – ತೆನೆಯಿಂದ ಕಸಕಡ್ಡಿ ಬೇರ್ಪಡಿಸುವುದು.

2. ತತ್ಸಮ - ತದ್ಭವ ಬರೆಯಿರಿ:
ಹಕ್ಕಿ – ಪಕ್ಷಿ, ಬ್ರಹ್ಮ – ಬೊಮ್ಮ, ಚಂದ್ರ – ಚಂದಿರ, ಯುಗ – ಜುಗ, ಅಂಗಳ – ಅಂಕಣ
3. ಸಂಧಿ ವಿಗ್ರಹಿಸಿ ಹೆಸರಿಸಿ:
ಇರುಳಳಿದು – ಇರುಳು + ಅಳಿದು = ಲೋಪಸಂಧಿ
ತೆರೆದಿಕ್ಕುವ –ತೆರೆದು + ಇಕ್ಕುವ = ಲೋಪಸಂಧಿ
ಹೊಸಗಾಲ – ಹೊಸ + ಕಾಲ = ಆದೇಶಸಂಧಿ
ದಿಗ್ಮಂಡಲ – ದಿಕ್ + ಮಂಡಲ = ಜಶ್ತ್ವಸಂಧಿ
ತಿಂಗಳಿನೂರು – ತಿಂಗಳಿನ + ಊರು = ಲೋಪಸಂಧಿ

4. ಈ ಪದ್ಯದಲ್ಲಿ ಬಂದಿರುವ ದ್ವಿರುಕ್ತಿಗಳು: 
ದಿನದಿನ, ಗರಿಗರಿ, ಬಣ್ಣ-ಬಣ್ಣ, ಖಂಡಖಂಡ, ಯುಗಯುಗ.
ಆ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ:
1. ಅದುವೇ - ಅವಧಾರಣಾರ್ಥಕ ಅವ್ಯಯ
2. ಮೆಲ್ಲಗೆ – ಸಾಮಾನ್ಯಾರ್ಥಕ ಅವ್ಯಯ
3. ಆದ್ದರಿಂದ – ಸಂಬಂಧಾರ್ಥಕ ಅವ್ಯಯ
4. ಅಲ್ಲದೆ – ಸಂಬಂಧಾರ್ಥಕ ಅವ್ಯಯ
5. ಅಯ್ಯೋ – ಭಾವಸುಚಕ ಅವ್ಯಯ
6.ಬೇಗನೇ – ಸಾಮಾನ್ಯಾರ್ಥಕ ಅವ್ಯಯ
7. ರೊಯ್ಯನೆ – ಅನುಕರಣಾವ್ಯಯ
8. ಧಗಧಗ – ಅನುಕರಣಾವ್ಯಯ
9. ಸಾಕು -  ಕ್ರಿಯಾರ್ಥಕ ಅವ್ಯಯ
10. ಓಹೋ – ಭಾವಸೂಚಕ ಅವ್ಯಯ
11. ಹೌದು – ಕ್ರಿಯಾರ್ಥಕ ಅವ್ಯಯ
12. ನೀನೇ – ಅವಧಾರಣಾರ್ಥಕ ಅವ್ಯಯ
*****



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon