ಪದ್ಯ-1- ಸಂಕಲ್ಪಗೀತೆ | ಜಿ.ಎಸ್.ಶಿವರುದ್ರಪ್ಪ | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು |

ಪದ್ಯ-1- ಸಂಕಲ್ಪಗೀತೆ | 10ನೇ ತರಗತಿ ಕನ್ನಡ ನೋಟ್ಸ್ | ಅಭ್ಯಾಸ ಪ್ರಶ್ನೋತ್ತರಗಳು |
ಜಿ.ಎಸ್.ಶಿವರುದ್ರಪ್ಪ
ಕೃತಿಕಾರರ ಪರಿಚಯ:
ಜಿ.ಎಸ್.ಶಿವರುದ್ರಪ್ಪ ಎಂದು ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರ ಕಾಲ 7-2-1926ರಿಂದ 23-12-2013. ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಇವರು ಸಾಮಗಾನ, ಚೆಲುವು ಒಲವು, ದೇವ ಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೋದಲ್ಲಿ ಇಪ್ಪತ್ತೆರಡುದಿನಗಳು, ಸೌಂದರ್ಯಸಮೀಕ್ಷೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರು ನಾಡೋಜ, ರಾಷ್ಟ್ರಕವಿ ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಸಂಕಲ್ಪಗೀತೆ ಪದ್ಯಭಾಗವನ್ನು –ಎದೆತುಂಬಿಹಾಡಿದೆನು ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
ಉ: ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲಿ ಮುನ್ನಡೆಸಬೇಕು.
2. ನದೀಜಲಗಳು ಏನಾಗಿವೆ?
ಉ: ನದೀಜಲಗಳು ಕಲುಷಿತವಾಗಿವೆ.
3.ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಉ: ಕಲುಷಿತವಾದ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4. ಕಾಡುಮೇಡುಗಳ ಸ್ಥಿತಿ ಹೇಗಿದೆ?
ಉ: ಕಾಡುಮೇಡುಗಳು ಬರಡಾದ ಸ್ಥಿತಿ ತಲುಪಿವೆ.
5. ಯಾವ ಎಚ್ಚರದೊಳು ಬದುಕಬೇಕಿದೆ?
ಉ: ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?
ಉ: ಅಂಧಕಾರವನ್ನು ಹೋಗಲಾಡಿಸಲು ದೀಪದ ಅವಶ್ಯಕತೆ ಇರುವಂತೆ ಬದುಕಿನಲ್ಲಿ ಅಥವಾ ಮನಸ್ಸಿನಲ್ಲಿ ಕವಿದ ನಿರಾಶೆಯ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಮತ್ತು ಪ್ರೀತಿಯ ಹಣತೆಯನ್ನು ಹಚ್ಚಬೇಕು. ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳೆನ್ನುವ ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯೆಡೆಗೆ ದೃಢವಾದ ಹೆಜ್ಜೆಗಳನ್ನಿಡುತ್ತ ಮುಂದೆ ಸಾಗಬೇಕು. ಅಜ್ಞಾನ, ನಿರಾಶೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ, ಪ್ರೀತಿಯ ಹಣತೆಯ ಹಚ್ಚಿ, ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿ ಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸೋಣ.

2. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
ಉ: ಕಲುಷಿತವಾದ ನದಿ ನೀರನ್ನು ಸುರಿದ ಮುಂಗಾರಿನ ಮಳೆಯು ಪರಿಶುದ್ಧಗೊಳಿಸುವ ಹಾಗೆ ಭ್ರಷ್ಟವಾಗಿರುವ ಸಮಾಜದಲ್ಲಿ ತುಂಬಿರುವ ಭೇದಭಾವ, ಅಸಹನೆ, ದ್ವೇಷ, ಅಸೂಯೆ, ಹಿಂಸೆ, ಭಯ, ಸಂಶಯ ಮೊದಲಾದವುಗಳನ್ನು ಪ್ರೀತಿ, ವಿಶ್ವಾಸ, ಭರವಸೆಗಳೆನ್ನುವ ಮುಂಗಾರಿನ ಮಳೆ ಸುರಿಸುವ ಮೂಲಕ ತೊಡೆದು ಹಾಕಲು ಪ್ರಯತ್ನಿಸಬೇಕಿದೆ. ಒಣಗಿ ಹೋಗಿರುವ ಗಿಡಮರಗಳು ವಸಂತ ಕಾಲದಿಂದ ಚಿಗುರುವ ಹಾಗೆ ಮನುಷ್ಯನ ಮನಸ್ಸಿನಲ್ಲಿ ಕವಿದ ಅಥವಾ ಸಮಾಜದಲ್ಲಿ ತುಂಬಿದ ನಿರಾಶೆಯೆನ್ನುವ ಒಣಗಿ ಹೋದ ಗಿಡಮರಗಳನ್ನು ಪ್ರೀತಿ, ವಿಶ್ವಾಸ, ಆತ್ಮವಿಶ್ವಾಸ, ಭರವಸೆಗಳೆನ್ನುವ ವಸಂತಕಾಲವನ್ನು ಮೂಡಿಸಿ ಸಂತೃಪ್ತಿ ಎನ್ನುವ ಹೊಸಚಿಗುರನ್ನು ಮೂಡಿಸೋಣ.

3. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಉ: ಜಾತಿ, ಮತ, ಮೇಲು, ಕೀಳು, ಅಸೂಯೆಯಿಂದ ಕೂಡಿದ ಪೈಪೋಟಿಗಳು, ದ್ವೇಷ ಅಸಹನೆಯ ಭಾವಗಳು ಮನುಷ್ಯರು ಪರಸ್ಪರ ಒಂದುಗೂಡಿ ಪ್ರೀತಿ ವಿಶ್ವಾಸದಿಂದ ಬಾಳಲು ಇರುವ ಅಡ್ಡಗೋಡೆಗಳಾಗಿವೆ. ಅಂತಹ ವೈರುಧ್ಯದ ಭಾವನೆಗಳನ್ನು ತೊಡೆದು ಹಾಕಬೇಕಾದ ಅಗತ್ಯವಿದೆ. ಪರಸ್ಪರರನ್ನು ದ್ವೇಷಿಸುವ, ಅನುಮಾನದಿಂದ ನೋಡುವ ಮನುಷ್ಯ ಮನುಷ್ಯರಲ್ಲಿ ಕಂದಕ ನಿರ್ಮಾಣ ಮಾಡುವ ಭಾವಗಳನ್ನು ಕೆಡವಿ ಹಾಕಿ ಪರಸ್ಪರರಲ್ಲಿ ಪ್ರೀತಿ, ಕರುಣೆ, ನಂಬಿಕೆ, ಆತ್ಮಸ್ಥೈರ್ಯ, ಮಾನವೀಯ ಭಾವಗಳನ್ನು ನಿರ್ಮಾಣ ಮಾಡಿ ಎಲ್ಲರನ್ನೂ ಒಂದುಗೂಡಿಸುವ ಸೇತುವೆಯಾಗುವ ಪ್ರಯತ್ನ ಮಾಡಬೇಕಿದೆ.

4. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ಉ: ಪ್ರತಿಯೊಂದು ಮತಕ್ಕೂ ಅದರದೇ ಆದ ದಾರಿಯಿದೆ ಎನ್ನುವ ಎಚ್ಚರದಲ್ಲಿ ಬದುಕೋಣ. ಭಿನ್ನತೆಯಿದ್ದರೂ ಸಹ ಭಾವನೆ ಒಂದೆ ಎಂಬ ಅರಿವು ಮೂಡಿಸಲು ಯತ್ನಿಸೋಣ. ಪರಸ್ಪರರಲ್ಲಿ ಮೂಡಿರುವ  ಸಂಶಯ, ಅಸಹನೆ, ಭಯಗಳಿಂದ ಉಂಟಾಗಿರುವ ನಿರಾಶೆಯನ್ನು ಹೋಗಲಾಡಿಸಿ ನಾಳಿನ ಭವಿಷ್ಯದ ಕುರಿತಾಗಿ ಹೊಸ ಕನಸುಗಳನ್ನು ಬಿತ್ತುವ, ಭರವಸೆಗಳನ್ನು ಮೂಡಿಸುವ, ಎಲ್ಲರೂ ಒಂದಾಗಿ ಬದುಕುವಂತೆ ಸಮಾಜದಲ್ಲಿ ಉತ್ಸಾಹ, ಆದರ್ಶಗಳ ವಾತಾವರಣ ಬೆಳೆಯುವಂತೆ ಮಾಡೋಣ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿಸುವ ಸಂಕಲ್ಪ ಮಾಡೋಣ.

III. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂದು ಕವಿ ಶಿವರುದ್ರಪ್ಪನವರ ಆಶಯ?
ಉ: ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢ ಸಂಕಲ್ಪವನ್ನು ಹೊಂದಿರಬೇಕು. ಕಾರಣಾಂತರಗಳಿಂದ ನಮ್ಮಲ್ಲಿ ಮನೆಮಾಡಿರುವ ಅಜ್ಞಾನ, ನಿರಾಶೆ, ಭಯ, ಹಿಂಸೆಗಳೆನ್ನುವ ಕತ್ತಲನ್ನು ಹೋಗಲಾಡಿಸಲು ಪ್ರೀತಿಯ ಹಣತೆಯನ್ನು ಹಚ್ಚಬೇಕು, ಸಮಸ್ಯೆಗಳಿಂದ ನಿರಾಶೆಗಳಿಂದ ಹೊಯ್ದಾಡುತ್ತಿರುವ ಜೀವನವೆನ್ನುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪವನ್ನು ಮಾಡಬೇಕು. ಸುತ್ತಲಿನ ಸಮಾಜದಲ್ಲಿ ತುಂಬಿರುವ ಹಿಂಸೆ, ಬ್ರಷ್ಟಾಚಾರ, ಜಾತೀಯತೆ, ಶೋಷಣೆ ಮೊದಲಾದ ಅಸಹನೀಯವಾದ ಭಾವಗಳನ್ನು ತೊಡಿದುಹಾಕಲು ಸ್ವತಃ ನಮ್ಮಲ್ಲಿ ಮೊದಲು ಮೌಲ್ಯಗಳನ್ನು ರೂಢಿಸಿಕೊಂಡು ಆ ಮೂಲಕ ಸಮಾಜದಲ್ಲಿ ತುಂಬಿರುವ ಕೊಳಕು ತೊಳೆದುಹಾಕಲು, ಸಮಾಜವೆನ್ನುವ ನದೀಜಲವನ್ನು ಪರಿಶುದ್ಧಗೊಳಿಸುವ ಮುಂಗಾರಿನ ಮಳೆಯಾಗುವ ಆಶಯವನ್ನು ಹೊಂದೋಣ. ನಿರಾಶೆಯಿಂದ ತುಂಬಿರುವ ಸಮಾಜದ ಜನರಲ್ಲಿ ಹೊಸ ಕನಸುಗಳನ್ನು ಚಿಗುರಿಸೋಣ. ಬಿದ್ದುಹೋಗಿರುವ ಆಶಾ ಗೋಪುರವನ್ನು ಮೇಲಕ್ಕೆತ್ತಿ ಹೊಸಭರವಸೆಗಳನ್ನು ಮೂಡಿಸಲು ಪ್ರಯತ್ನಿಸೋಣ. ಮನುಷ್ಯ ಮನುಷ್ಯರ ನಡುವೆ ನೆಲೆಸಿರುವ ಅಸಮಾನತೆ, ಮತಾಂಧತೆ ಮೊದಲಾದ ಭಾವನೆಗಳನ್ನು ಬೀಳಿಸಿ ಎಲ್ಲರನ್ನೂ ಒಂದುಗೂಡಿಸುವ ಏಕತೆಯ ಸೇತುವೆಯಾಗಲು ಪ್ರಯತ್ನಿಸೋಣ. ಎಲ್ಲ ಧರ್ಮಗಳೂ ಹೇಳುವ ನೀತಿ ಒಂದೇ ಎನ್ನುವ ಎಚ್ಚರವನ್ನು ಬೆಳೆಸಿಕೊಂಡು ಎಲ್ಲರೂ ಕೂಡಿ ಬಾಳಲು ಪ್ರಯತ್ನಿಸೋಣ. ನಾಳೆ ಏನೋ ಹೇಗೋ ಎಂಬ ಭಯ ಸಂಶಯವನ್ನು ಹೋಗಲಾಡಿಸಿ ಹೊಸ ಕನಸುಗಳನ್ನು ಅದನ್ನು ಈಡೇರಿಸಿಕೊಳ್ಳುವ ಛಲವನ್ನು ಮೂಡಿಸಲು ಪ್ರಯತ್ನಿಸೋಣ. ಇವೇ ಮೊದಲಾದ ಸಂಕಲ್ಪಗಳನ್ನು ಕೈಗೊಳ್ಳಬೇಕೆಂದು ಕವಿ ಜಿ.ಎಸ್.ಶಿವರುದ್ರಪ್ಪನವರ ಆಶಯವಾಗಿದೆ.

2. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ?
ಉ: ಸಂಕಲ್ಪದಿಂದ ದೃಢನಿರ್ಧಾರದಿಂದ ಕಾರ್ಯಶೀಲರಾದರೆ ಅಸಾಧ್ಯವಾದುದೂ ಯಾವುದೂ ಇಲ್ಲ. ಪ್ರತಿಫಲದ ಅಪೇಕ್ಷೆಯಿಲ್ಲದೇ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ತುಂಬಿರುವ ಅಜ್ಞಾನ, ಹಿಂಸೆಗಳ ಕತ್ತಲೆಯನ್ನು ಪ್ರೀತಿಯ ಹಣತೆಯನ್ನು ಹಚ್ಚುವ ಮೂಲಕ ಹೋಗಲಾಡಿಸಿ ಹಲವು ತುಮುಲಗಳಿಂದ ಹೊಯ್ದಾಡುತ್ತಿರುವ ಬದುಕಿಗೆ ಭದ್ರತೆ ಕಲ್ಪಿಸುವತ್ತ ಕಾರ್ಯೋನ್ಮುಖರಾಗಬೇಕು. ನಮ್ಮ ಸುತ್ತಮುತ್ತಲೂ ತುಂಬಿರುವ ಹಿಂಸೆ, ಅನಾಚಾರ, ಶೋಷಣೆಗಳನ್ನು ತೊಡೆದುಹಾಕಿ ಸ್ವಸ್ಥ ಮನಸಿನ ಸುಂದರ ವಾತಾವರಣ ಕಲ್ಪಿಸಲು ಯತ್ನಿಸಬೇಕಿದೆ. ಏನು ಮಾಡಿದರೂ ನಿರರ್ಥಕ ಎಂಬ ಭಾವನೆಯಿಂದ ಹೊರತಂದು ಭರವಸೆಗಳನ್ನು ಮೂಡಿಸಿ ನಮ್ಮ ಮಧ್ಯೆ ಮೂಡಿರುವ ಪ್ರತ್ಯೇಕತೆಯನ್ನು ಇಲ್ಲವಾಗಿಸಿ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಸಮಾಜದ ಜನರಲ್ಲಿ ಮೂಡಿಸಬೇಕಿದೆ. ಎಲ್ಲ ಧರ್ಮಗಳ ಉದ್ದೇಶವೂ ಜೀವನದ ಸನ್ಮಾರ್ಗವನ್ನು ತೋರಿಸುವುದೇ ಆಗಿದೆ. ಹಾಗಾಗಿ ಎಲ್ಲ ಧರ್ಮಗಳನ್ನೂ ಗೌರವಿಸುವ ಎಲ್ಲರೂ ಒಂದಾಗಿ ಬಾಳುವ ಸದಾಶಯವನ್ನು ರೂಪಿಸಲು ಯತ್ನಿಸಬೇಕು. ನಾಳಿನ ಭವಿಷ್ಯದ ಕುರಿತಾದ ಸಂಶಯ ಮತ್ತು ಭಯದ ಭಾವಗಳನ್ನು ಹೋಗಲಾಡಿಸಿ ಹೊಸ ಕನಸುಗಳನ್ನು ಬಿತ್ತುವ ದೃಢ ಸಂಕಲ್ಪ ಮಾಡಬೇಕು. ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢ ಸಂಕಲ್ಪವನ್ನು ಹೊಂದಿರಬೇಕು. ಹೋಗಬೇಕಾದ ದಾರಿ ತಲುಪಬೇಕಾದ ಗುರಿ ಸ್ಪಷ್ಟವಾಗಿದ್ದರೆ ಅರ್ಧ ಯಶಸ್ಸನ್ನು ಪಡೆದ ಹಾಗೆ. ಸಾಧಕನು ತಾನು ಕಂಡ ಕನಸನ್ನು ಅದೆಷ್ಟೇ ತೊಡಕುಗಳೂ ಬಂದರೂ, ಅಡ್ಡಿ ಆತಂಕಗಳು ಎದುರಾದರೂ ನನಸಾಗಿಸುತ್ತಾನೆ. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂದು ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಜಿ.ಎಸ್.ಶಿವರುದ್ರಪ್ಪನವರು ಅಭಿಪ್ರಾಯಪಟ್ಟಿದ್ದಾರೆ.

IV. ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. “ಪ್ರೀತಿಯ ಹಣತೆಯ ಹಚ್ಚೋಣ.”
ಉ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್.ಶಿವರುದ್ರಪ್ಪನವರು ಬರೆದ “ಸಂಕಲ್ಪಗೀತೆ” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳೆನ್ನುವ ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯೆಡೆಗೆ ದೃಢವಾದ ಹೆಜ್ಜೆಗಳನ್ನಿಡುತ್ತ ಮುಂದೆ ಸಾಗಬೇಕು. ಅಜ್ಞಾನ, ನಿರಾಶೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ, ಪ್ರೀತಿಯ ಹಣತೆಯ ಹಚ್ಚಿ, ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿ ಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸಬೇಕೆಂದು ಕವಿ ಆಶಿಸಿದ್ದಾರೆ.
ಸ್ವಾರಸ್ಯ: ಉತ್ತಮ ಸಮಾಜ ನಿರ್ಮಾಣಕ್ಕೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸದ ಅಗತ್ಯವಿದೆ. ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಅರಿವು ಹಾಗೂ ಅಗತ್ಯತೆಯ ಕುರಿತು ಮೇಲಿನ ವಾಕ್ಯವು ಸ್ಪಷ್ಟಪಡಿಸುತ್ತದೆ.

2. “ಮುಂಗಾರಿನ ಮಳೆಯಾಗೋಣ.”
ಉ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್.ಶಿವರುದ್ರಪ್ಪನವರು ಬರೆದ “ಸಂಕಲ್ಪಗೀತೆ” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ: ಕಲುಷಿತವಾದ ನದಿ ನೀರನ್ನು ಸುರಿದ ಮುಂಗಾರಿನ ಮಳೆಯು ಪರಿಶುದ್ಧಗೊಳಿಸುವ ಹಾಗೆ ಭ್ರಷ್ಟವಾಗಿರುವ ಸಮಾಜದಲ್ಲಿ ತುಂಬಿರುವ ಭೇದಭಾವ, ಅಸಹನೆ, ದ್ವೇಷ, ಅಸೂಯೆ, ಹಿಂಸೆ, ಭಯ, ಸಂಶಯ ಮೊದಲಾದವುಗಳನ್ನು ಪ್ರೀತಿ, ವಿಶ್ವಾಸ, ಭರವಸೆಗಳೆನ್ನುವ ಮುಂಗಾರಿನ ಮಳೆ ಸುರಿಸುವ ಮೂಲಕ ತೊಡೆದು ಹಾಕಲು ಪ್ರಯತ್ನಿಸೋಣವೆಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಪರಿಸರ ಸಂರಕ್ಷಣೆಯ ಮಹತ್ವದ ಜೊತೆಗೆ, ಬರಿದಾಗಿರುವ ಭೂಮಿಯನ್ನು ಹಸಿರಾಗಿಸಲು, ಕ್ರೌರ್ಯ, ಅಸಹನೆ, ದ್ವೇಷಗಳಿಂದ ತುಂಬಿರುವ ಮನುಷ್ಯನ ಮನಸ್ಸಿನ ಕೊಳೆ ಹೋಗಿಸಲು ಮುಂಗಾರಿನ ಮಳೆಯಂತಾಗಬೇಕು ಎಂಬ ಸಂದೇಶ ಈ ವಾಕ್ಯದಲ್ಲಿದೆ.

3. “ಹೊಸ ಭರವಸೆಗಳ ಕಟ್ಟೋಣ.”
ಉ: ಉ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್.ಶಿವರುದ್ರಪ್ಪನವರು ಬರೆದ “ಸಂಕಲ್ಪಗೀತೆ” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. 
ಸಂದರ್ಭ: ನಿರ್ಮಿಸುವುದು ಕಷ್ಟ. ಆದರೆ ಅದನ್ನೇ ಕ್ಷಣ ಮಾತ್ರದಲ್ಲಿ ನಾಶ ಮಾಡಬಹುದು. ಬಿದ್ದು ಹೋಗಿರುವ ನಿರೀಕ್ಷೆಯ ಆಶಾಸೌಧವನ್ನು ಹೊಸ ಭರವಸೆಗಳ ಮೂಲಕ ಮತ್ತೆ ನಿಲ್ಲಿಸಬೇಕಾದ ಪರಿಸ್ಥಿತಿಯ ಅನಿವಾರ್ಯತೆ ಇದೆ. ಮಾನಸಿಕವಾಗಿ ಅಧಃಪತನಕ್ಕೆ ಕುಸಿದು ಹೋಗಿರುವ ಜನರಲ್ಲಿ ಅವರಲ್ಲಿರುವ ಭಯ ಭೀತಿಯ ಭಾವವನ್ನು ತೊಡೆದು ಹಾಕಿ ಧೈರ್ಯವನ್ನು ತುಂಬಲು ಪ್ರಯತ್ನಿಸೋಣವೆಂದು ಕವಿ ಆಶಿಸಿದ್ದಾರೆ.
ಸ್ವಾರಸ್ಯ: ಭರವಸೆಯೇ ಜೀವಿಗಳನ್ನು ಬದುಕುವಂತೆ ಮಾಡುವುದು. ನಾಳಿನ ಕುರಿತಾದ ಭರವಸೆಗಳಿಲ್ಲದೇ ನಿರಾಶೆಯಿಂದ ಬದುಕುವುದು ಅಸಾಧ್ಯ. ಆ ಭರವಸೆ ಮೂಡಿಸುವ ಕಾರ್ಯವಾಗಬೇಕಿದೆ ಎಂಬುದನ್ನು ಮೇಲಿನ ವಾಕ್ಯವು ಸೂಚಿಸುವುದು.

4. “ಹೊಸ ಎಚ್ಚರದೊಳು ಬದುಕೋಣ.”
ಉ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್.ಶಿವರುದ್ರಪ್ಪನವರು ಬರೆದ “ಸಂಕಲ್ಪಗೀತೆ” ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. 
ಸಂದರ್ಭ: ಪ್ರತಿಯೊಂದು ಮತಕ್ಕೂ ಅದರದೇ ಆದ ದಾರಿಯಿದೆ ಎನ್ನುವ ಎಚ್ಚರದಲ್ಲಿ ಬದುಕೋಣ. ಎಲ್ಲ ಧರ್ಮಗಳನ್ನೂ, ಎಲ್ಲ ಧರ್ಮಗಳ ಜನರನ್ನೂ ಪರಸ್ಪರ ಗೌರವಿಸುವ ಭಾವನೆ ಬೆಳೆಸಿಕೊಳ್ಳೋಣ. ಭಿನ್ನತೆಯಿದ್ದರೂ ಸಹ ಭಾವನೆ ಒಂದೆ ಎಂಬ ಅರಿವು ಮೂಡಿಸಲು ಯತ್ನಿಸೋಣ ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಸಮಾಜದಲ್ಲಿ ಸಾಮರಸ್ಯದ ಬಾಳ್ವೆಗೆ ಪರಸ್ಪರ ಧಾರ್ಮಿಕ ಸಾಮರಸ್ಯ ಅತೀ ಅಗತ್ಯವಾದುದು ಎಲ್ಲ ಮತಗಳೂ ದಾರಿ ದೀಪಗಳು. ಅವುಗಳನ್ನು ಗೌರವಿಸೋಣ, ರಕ್ಷಿಸೋಣ ಎಂಬ ಎಚ್ಚರಿಕೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.

V. ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1. “ಸಂಕಲ್ಪ ಗೀತೆ” ಪದ್ಯವನ್ನು ____________ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. (ಎದೆ ತುಂಬಿ ಹಾಡಿದೆನು)
2. ಕತ್ತಲೆಯೊಳಗೆ ಪ್ರೀತಿಯ ___________ಹಚ್ಚೋಣ. (ಹಣತೆಯ)
3. ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ___________ಕಟ್ಟೋಣ. (ಭರವಸೆಗಳ)
4. ನಾಳಿನ ಕನಸನು ___________ನಲ್ಲಿ ಬಿತ್ತೋಣ.(ಭಯ ಸಂಶಯದೊಳು ತುಂಬಿದ ಕಣ್ಣಿ)
5. ಜಿ.ಎಸ್.ಶಿವರುದ್ರಪ್ಪನವರು ____________ಯಲ್ಲಿ ಸಮಾವೇಶಗೊಂಡ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. (ದಾವಣಗೆರೆ 1992, 61ನೇ)

ಭಾಷಾ ಚಟುವಟಿಕೆ: 
1. ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.
ನಿಲ್ಲಿಸು, ನಡೆಸು, ಹಚ್ಚುವುದು, ಮುಟ್ಟೋಣ, ಕಟ್ಟುವುದು, ಆಗೋಣ.
ಉ: ನಿಲ್ಲಿಸು-ನಿಲ್ಲು, ನಡೆಸು-ನಡೆ, ಹಚ್ಚುವುದು-ಹಚ್ಚು,  ಮುಟ್ಟೋಣ-ಮುಟ್ಟು,  ಕಟ್ಟುವುದು-ಕಟ್ಟು ಆಗೋಣ-ಆಗು.
2. ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ?
ಪ್ರೀತಿಯ, ಬಿರುಗಾಳಿಗೆ, ಜಲಕ್ಕೆ, ಬಿದ್ದುದನ್ನು, ಭರವಸೆಗಳ
ಉ: ಪ್ರೀತಿಯ-ಅ-ಷಷ್ಠಿ,  ಬಿರುಗಾಳಿಗೆ-ಗೆ-ಚತುರ್ಥಿ, ಜಲಕ್ಕೆ-ಕ್ಕೆ-ಚತುರ್ಥಿ, ಬಿದ್ದುದನ್ನು-ಅನ್ನು-ದ್ವಿತೀಯಾ, ಭರವಸೆಗಳ-ಅ-ಷಷ್ಠಿ.
3. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.
ಸಂಶಯದೊಳ್-ಒಳ್-ಸಪ್ತಮಿ ಜಲದಿಂ-ಇಂ-ತೃತೀಯಾ
ಮರದತ್ತಣಿಂ-ಅತ್ತಣಿಂ-ಪಂಚಮಿ ರಾಯಂಗೆ-ಗೆ-ಚತುರ್ಥಿ
****



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon